ನವದೆಹಲಿ, ಸೆ. 02 (DaijiworldNews/AA): ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹಸ್ತಾಂತರಿಸಿದರು.

ದೆಹಲಿಯಲ್ಲಿ ನಡೆಯುತ್ತಿರುವ ಸೆಮಿಕಾನ್ ಇಂಡಿಯಾ 2025 ಕಾರ್ಯಕ್ರಮದಲ್ಲಿ 4 ಅನುಮೋದಿತ ಯೋಜನೆಗಳ ಪರೀಕ್ಷಾ ಚಿಪ್ಗಳೊಂದಿಗೆ ಮೊದಲ ಮೇಡ್ ಇನ್ ಇಂಡಿಯಾ ಪ್ರೊಸೆಸರ್ ಅನ್ನು ಹಸ್ತಾಂತರಿಸಲಾಯಿತು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಅಭಿವೃದ್ಧಿಪಡಿಸಿದ ವಿಕ್ರಮ್ ಚಿಪ್, ರಾಷ್ಟ್ರದ ಮೊದಲ ಸಂಪೂರ್ಣ ಸ್ಥಳೀಯ 32-ಬಿಟ್ ಮೈಕ್ರೊಪ್ರೊಸೆಸರ್ ಆಗಿದೆ. ಈ ಚಿಪ್ ಅನ್ನು ಬಾಹ್ಯಾಕಾಶ ಉಡಾವಣಾ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, "ನಾವು ಭಾರತದ ಸೆಮಿಕಂಡಕ್ಟರ್ ಮಿಷನ್ ಅನ್ನು ಪ್ರಾರಂಭಿಸಿದ್ದೇವೆ. ಮೂರೂವರೆ ವರ್ಷಗಳ ಅಲ್ಪಾವಧಿಯಲ್ಲಿ ಜಗತ್ತು ಭಾರತವನ್ನು ವಿಶ್ವಾಸದಿಂದ ನೋಡುತ್ತಿದೆ. ಇಂದು 5 ಸೆಮಿಕಂಡಕ್ಟರ್ ಘಟಕಗಳ ನಿರ್ಮಾಣವು ತ್ವರಿತಗತಿಯಲ್ಲಿ ನಡೆಯುತ್ತಿದೆ. ನಾವು ಪ್ರಧಾನಿ ಮೋದಿ ಅವರಿಗೆ ಮೊದಲ ಭಾರತದಲ್ಲಿ ತಯಾರಿಸಿದ (ಮೇಡ್ ಇನ್ ಇಂಡಿಯಾ) ಚಿಪ್ ಅನ್ನು ಹಸ್ತಾಂತರಿಸಿದ್ದೇವೆ" ಎಂದು ತಿಳಿಸಿದರು.
"ಆರು ರಾಜ್ಯಗಳಲ್ಲಿ 1.60 ಲಕ್ಷ ಕೋಟಿ ರೂ.ಗೂ ಹೆಚ್ಚು ಹೂಡಿಕೆಯೊಂದಿಗೆ 10 ಪ್ರಮುಖ ಯೋಜನೆಗಳನ್ನು ಅನುಮೋದಿಸಲಾಗಿದೆ. ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯಡಿಯಲ್ಲಿ 23 ಕ್ಕೂ ಹೆಚ್ಚು ವಿನ್ಯಾಸ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುತ್ತಿದ್ದು, ಭಾರತದಲ್ಲೇ ಉತ್ಪಾದನೆ ತೀವ್ರಗೊಳಿಸುವ ಪ್ರಯತ್ನ ನಡೆದಿದೆ" ಎಂದು ಹೇಳಿದರು.
ಪ್ರಧಾನಿ ಮೋದಿ ಮಾತನಾಡಿ, "ಜಗತ್ತು ಭಾರತವನ್ನು ನಂಬುತ್ತದೆ. ಭಾರತದೊಂದಿಗೆ ಸೆಮಿಕಂಡಕ್ಟರ್ ಭವಿಷ್ಯವನ್ನು ನಿರ್ಮಿಸಲು ಜಗತ್ತು ಸಿದ್ಧವಾಗಿದೆ. ಕೆಲವೇ ದಿನಗಳ ಹಿಂದೆ, ಈ ವರ್ಷದ ಮೊದಲ ತ್ರೈಮಾಸಿಕದ ಜಿಡಿಪಿ ಸಂಖ್ಯೆಗಳು ಬಂದಿವೆ. ಮತ್ತೊಮ್ಮೆ ಭಾರತವು ನಿರೀಕ್ಷೆಗಿಂತ ಮೌಲ್ಯಮಾಪನಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ವಿಶ್ವದ ಆರ್ಥಿಕತೆಯಲ್ಲಿ ಕಳವಳಗಳಿರುವ ಸಮಯದಲ್ಲಿ, ಆರ್ಥಿಕ ಸ್ವಾರ್ಥದಿಂದ ಸೃಷ್ಟಿಸಲ್ಪಟ್ಟ ಸವಾಲುಗಳಿವೆ. ಈ ವಾತಾವರಣದಲ್ಲಿ, ಭಾರತವು ಶೇಕಡಾ 7.8 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ" ಎಂದರು.