ಬೆಂಗಳೂರು, ಸೆ. 02 (DaijiworldNews/AK): ರಾಜ್ಯ ಸಚಿವಸಂಪುಟದ ಸಭೆ ಇದೇ 4ರಂದು ನಡೆಯಲಿದೆ. ಆ ಸಂದರ್ಭದಲ್ಲಿ ನಾಗಮೋಹನ್ದಾಸ್ ಅವರ ವರದಿ ಅಥವಾ ಮಾಧುಸ್ವಾಮಿಯವರ ನೇತೃತ್ವದ ವರದಿಯನ್ನು ಒಪ್ಪಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಗುಂಪುಗಳಿಗೆ ಅನ್ಯಾಯವಾಗಿದೆ. ಬೆಂಗಳೂರು ಸೇರಿ ನಾಳೆ ಇಡೀ ರಾಜ್ಯದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಗಮನ ಸೆಳೆದರು.
ಸಮಾನರು- ಅಸಮಾನರನ್ನು ಒಂದೇ ಪ್ರವರ್ಗದಲ್ಲಿ ತರಬಾರದೆಂಬ ಸುಪ್ರೀಂ ಕೋರ್ಟಿನ ಸೂಚನೆಯನ್ನು ಕೂಡ ಪಾಲಿಸಿಲ್ಲ; ನಾಗಮೋಹನ್ದಾಸ್ ಅವರ ವರದಿಯನ್ನೂ ಪರಿಗಣಿಸಿಲ್ಲ. ಇಲ್ಲಿ ರಾಜಕೀಯ ತೇಪೆ ಹಚ್ಚುವ ವರ್ಗೀಕರಣ ಮಾಡಿದ್ದಾರೆ ಎಂದು ಆರೋಪಿಸಿದರು.
ರಾಜಕೀಯ ಇಚ್ಛಾಶಕ್ತಿ, ರಾಜಕೀಯ ಲಾಭಕ್ಕಾಗಿ ವರ್ಗೀಕರಣ ಮಾಡಿದ್ದಾರೆ. ಇದನ್ನು ಒಪ್ಪಲಾಗದು ಎಂದು ತಿಳಿಸಿದರು. ಸರಕಾರವು ಬಹಳ ತರಾತುರಿಯಲ್ಲಿ ನೇಮಕಾತಿ ಪ್ರಾರಂಭ ಮಾಡಿದೆ. ಕೆಪಿಎಸ್ಸಿಗೂ ನಿರ್ದೇಶನ ನೀಡಿದ್ದು, ನೇಮಕಾತಿ ಪ್ರಕ್ರಿಯೆಗಳು ಈ ಗೊಂದಲದ ನಡುವೆ ಪ್ರಾರಂಭವಾಗಿದೆ ಎಂದರು. ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಬೇಕು; ಉದ್ಯೋಗ, ಶಿಕ್ಷಣ, ಅನುದಾನಕ್ಕೂ ಈ ಆದೇಶ ಅನ್ವಯ ಆಗುವಂತೆ ಮಾರ್ಪಾಡು ಮಾಡಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರ ಸರಕಾರವು ಸರ್ವ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳ ವಿಶೇಷ ಸಭೆ ಕರೆಯಬೇಕು. ಈ ಸಭೆಗೆ ಮೀಸಲಾತಿಯ ಜ್ಞಾನ ಇರುವವರು, ನಿವೃತ್ತ ಅಧಿಕಾರಿಗಳನ್ನೂ ಕರೆಯಬೇಕು. ಅಲ್ಲಿ ತೀರ್ಮಾನಿಸಿದರೆ ಎಲ್ಲರಿಗೂ ಒಪ್ಪಿಗೆ ಆಗಲಿದೆ ಎಂದು ಸಲಹೆ ನೀಡಿದರು.
ಬೊಮ್ಮಾಯಿಯವರದು ಎಲ್ಲ ಜನಾಂಗಗಳಿಗೆ ಒಪ್ಪಿಗೆ ಆಗುವ ನಿರ್ಧಾರ
ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ನಮ್ಮ ಪಕ್ಷದ ಸರಕಾರ ಇದ್ದಾಗ, ಮಾಧುಸ್ವಾಮಿಯವರ ನೇತೃತ್ವದ ವರದಿಯು ಹೆಚ್ಚುಕಡಿಮೆ ಎಲ್ಲ ಜನಾಂಗದವರು ಒಪ್ಪಿಗೆ ಆಗುವಂಥ ವರದಿಯಾಗಿತ್ತು. ಮಾದಿಗ- 6, ಛಲವಾದಿ- ಶೇ5.5, ಲಂಬಾಣಿ, ಬೋವಿ, ಕೊರಮ- ಕೊರಚ ಶೇ 4.5, ಅಲೆಮಾರಿಗಳಿಗೆ ಶೇ 1 ಸೇರಿಸಿದ್ದರು. ಅದು ಸರಿಯಿಲ್ಲವೆಂದು 150 ಕೋಟಿ ಖರ್ಚು ಮಾಡಿ ನಾಗಮೋಹನ್ದಾಸ್ ಅವರ ವರದಿ ತಯಾರು ಮಾಡಿಸಿ, ನಾಗಮೋಹನ್ದಾಸ್ ಅವರಿಗೂ ಅವಮಾನ ಮಾಡಿದ್ದಾರೆ. 150 ಕೋಟಿ ಸರಕಾರಿ ಬೊಕ್ಕಸಕ್ಕೆ ಹಾನಿ ಮಾಡುವ ಕೆಟ್ಟ ಕೆಲಸವನ್ನು ಸಿದ್ದರಾಮಯ್ಯನವರ ಸರಕಾರ ಮಾಡಿದೆ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು.