ಮೈಸೂರು, ಸೆ. 02 (DaijiworldNews/AK):ಧರ್ಮಸ್ಥಳಕ್ಕೆ ಬಿಜೆಪಿ ಕೈಗೊಂಡಿರುವುದು ಧರ್ಮ ಯಾತ್ರೆಯಲ್ಲ ರಾಜಕೀಯ ಯಾತ್ರೆಯೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು.

ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿ ಈಗ ಎನ್ ಐ ಎ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
ಎಸ್ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ದೇಹಗಳು ಸಿಗದೇ ಹೋದಾಗ ಒತ್ತಾಯಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೇ ಸ್ವತಃ ಸತ್ಯ ಹೊರಬರಲಿ ಎಂದು ಎಸ್ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕೆಂದಿದ್ದಾರೆ. ಎಸ್ ಐ ಟಿ ತನಿಖೆ ಸ್ವತಂತ್ರವಾಗಿ ಮಾಡುತ್ತಿದ್ದು ನಾವ್ಯಾರು ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಸತ್ಯ ಹೊರಬರಬೇಕು ಎಂದರು.
ಎಲ್ಲಾ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು. ಹೊರದೇಶಗಳಿಂದ ಇದಕ್ಕಾಗಿ ಹಣ ಬಂದಿದೆ ಎಂಬ ಬಿಜೆಪಿ ಆರೋಪದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಬಿಜೆಪಿಯವರಿಗೆ ಹಣ ಬಂದಿದೆ ಎಂದರು.ವಿರೋಧಿಗಳು ಟೀಕೆಯನ್ನು ಮಾಡಲಿ. ಆದರೆ ಎಲ್ಲಾ ವಿಷಯಗಳನ್ನೂ ರಾಜಕೀಯವಾಗಿ ಬಳಸಲು ಹೋಗಬಾರದು. ಇದರಲ್ಲಿ ಸತ್ಯವಿಲ್ಲ ಎಂದರು.
ಬಿಜೆಪಿ ಯಾರ ಪರ ಇದ್ದಾರೆ?
ಸೌಜನ್ಯ ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು. ಒಂದು ಕಡೆ ವೀರೇಂದ್ರ ಹೆಗಡೆಯವರ ಪರ ಎನ್ನುತ್ತಾರೆ ಮತ್ತೊಂದಡೆ ಸೌಜನ್ಯ ಪರ ಎನ್ನುತ್ತಾರೆ ಎಂದು ಹೇಳಿದರು. ಒಂದು ಕಡೆ ವೀರೇಂದ್ರ ಹೆಗ್ಗಡೆಯವರಿಗೆ ಜೈಕಾರ ಹಾಕುತ್ತಾರೆ ಮತ್ತೊಂದು ಕಡೆ ಸೌಜನ್ಯ ಪರ ಇರುವುದಾಗಿ ಹೇಳುತ್ತಾರೆ. ನಿಜವಾಗಿಯೂ ಇವರು ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು.
ಅಶೋಕ್ ಸದನದಲ್ಲಿ ಬೇರೆ ಚರ್ಚೆ ಮಾಡಿದ್ದರು
ಚಿನ್ನಯ್ಯ ಎಂಬ ವ್ಯಕ್ತಿಯನ್ನು ಕರೆತಂದಿರುವುದೇ ಕಾಂಗ್ರೆಸ್ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ ಸದನದಲ್ಲಿ ಈ ಬಗ್ಗೆ ಚರ್ಚೆಯಾದಾಗ ಬೇರೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಶಾಸಕ ಸುನೀಲ್ ಕುಮಾರ್, ಈಗ ಬೇರೆ ಹೇಳುತ್ತಿದ್ದಾರೆ ಎಂದು ತಿಳಿಸಿದ ಮುಖ್ಯಮಂತ್ರಿಗಳು ದಿನಕ್ಕೊಂದು ಹೇಳಿಕೆ ಕೊಡಬಾರದು. ಅಸತ್ಯದ ಮೇಲೆ ಚರ್ಚೆ ಮಾಡಿದರೆ ಹೀಗೆ ಆಗುವುದು ಎಂದರು.
ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ
12 ವರ್ಷಗಳ ಹಿಂದೆ ಅಪಹರಣ ವಾಗಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಎಸ್ಐಟಿಗೆ ಮಹಿಳೆಯೊಬ್ಬರು ದೂರ ನೀಡಿರುವ ಬಗ್ಗೆ ಮಾತನಾಡಿ ಇದನ್ನು ಸಿಬಿಐ ತನಿಖೆ ನಡೆದಾಗ ಏಕೆ ಹೇಳಲಿಲ್ಲ? ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ.
ಸೌಜನ್ಯ ಪ್ರಕರಣದ ಮರು ತನಿಖೆ: ಸೌಜನ್ಯ ತಾಯಿ ತೀರ್ಮಾನಿಸಬೇಕು
ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ನಾನು ಅದರ ತೀರ್ಪನ್ನು ನೋಡಿಲ್ಲ. ಈ ಬಗ್ಗೆ ಸೌಜನ್ಯ ತಾಯಿ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.