ಬೆಂಗಳೂರು, ಆಗಸ್ಟ್ 28 (DaijiworldNews/AK): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಾಮುಂಡಿ ಬೆಟ್ಟವು ಕೇವಲ ಹಿಂದೂಗಳ ಆಸ್ತಿಯಲ್ಲ ಎಂಬ ಮಾತನಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಕುಮಾರರು ಯಾರನ್ನೋ ಸಂತಸ ಪಡಿಸಲು ಹಾಗೂ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಈ ರೀತಿ ಹಿಂದೂಗಳಿಗೆ ಅಪಮಾನ ಮಾಡಿರುವುದನ್ನು ಹಿಂದೂ ಸಮಾಜ ಒಪ್ಪಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ದಸರಾ ಉತ್ಸವ, ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮೀಯರೂ ಭೇಟಿ ಕೊಡುತ್ತಾರೆಂಬುದು ನಮಗೂ ಗೊತ್ತಿದೆ. ಆದರೆ, ಇದು ಹಿಂದೂಗಳಿಗೆ ಸಂಬಂಧಿಸಿದ್ದಲ್ಲ ಎಂಬ ಹೇಳಿಕೆ ಹಿಂದೂಗಳಿಗೆ ಮಾಡಿದ ಅಪಮಾನ; ಇದು ಅಕ್ಷಮ್ಯ ಅಪರಾಧ ಎಂದು ವಿಶ್ಲೇಷಿಸಿದರು.
ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ನಮಸ್ತೇ ಸದಾ ವತ್ಸಲೇ ಗೀತೆ ಹೇಳಿದರು. ತಕ್ಷಣ ದೆಹಲಿ ಹೈಕಮಾಂಡಿನ ಒತ್ತಡ ಬಂದು ಕ್ಷಮಾಪಣೆ ಕೇಳುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹೈಕಮಾಂಡಿನದು ಒಡೆದಾಳುವ ನೀತಿಯ ಸಂಸ್ಕಂತಿ. ಹಾಗಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಪದೇಪದೇ ಹಿಂದೂಗಳ ಅಪಮಾನ, ಹಿಂದೂ ಕಾರ್ಯಕರ್ತರ ಅವಮಾನ, ನಮ್ಮ ಪರಂಪರೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಅಷ್ಟೆಲ್ಲ ಅಪಪ್ರಚಾರ ನಡೆಯುತ್ತಿದ್ದರೂ ಬಾಯಿ ಮುಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲಿಲ್ಲ ಎಂದು ಆಕ್ಷೇಪಿಸಿದರು.
ಮುಖ್ಯಮಂತ್ರಿ ಆಗುವ ಕನಸು ನನಸಾಗಲು
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದು, ಆ ಕನಸು ನನಸಾಗಲಿ ಎಂಬ ದೃಷ್ಟಿಯಿಂದ ಗಾಂಧಿ ಕುಟುಂಬವನ್ನು ಖುಷಿಪಡಿಸಲು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ತಮಗೆ ಅನಿಸುತ್ತಿರುವುದಾಗಿ ಹೇಳಿದರು. ಇದೇ ಡಿ.ಕೆ.ಶಿವಕುಮಾರ್ ಅವರು ಗಾಂಧಿ ಕುಟುಂಬವನ್ನು ಖುಷಿಪಡಿಸಲು ರಾಮನಗರದಲ್ಲಿ ಏಸುಕ್ರಿಸ್ತನ 115 ಅಡಿಯ ಪ್ರತಿಮೆ ಸ್ಥಾಪಿಸಲು ಮುಂದಾಗಿದ್ದರು ಎಂದು ವಿಜಯೇಂದ್ರ ಅವರು ಟೀಕಿಸಿದರು.