ನವದೆಹಲಿ, ಆ. 26 (DaijiworldNews/AA): ಅಮೆರಿಕಕ್ಕೆ ಆಮದಾಗುವ ಭಾರತದ ಸರಕುಗಳ ಮೇಲೆ ವಿಧಿಸಿರುವ ಶೇ.50 ಸುಂಕವು ಆಗಸ್ಟ್ 27ರಿಂದ ಜಾರಿಯಾಗಲಿದೆ. ಇದರಿಂದ ಭಾರತದ ಆರ್ಥಿಕತೆಗೆ ಹೊಡೆತ ಬೀಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದಲ್ಲಿ ಮಾರಾಟ ಮಾಡಲಾಗುವ ಭಾರತದ ಸರಕುಗಳಿಗೆ ವಿಧಿಸಲಾಗಿದ್ದ ಶೇ.50 ರಷ್ಟು ಸುಂಕ ಆ. 27ರಿಂದ ಜಾರಿಗೆ ಬರಲಿದೆ. ಅದರಂತೆ ಆ.27ರಿಂದ ಅಮೆರಿಕದ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ಸರಕುಗಳು 50% ಸುಂಕಕ್ಕೆ ಒಳಪಟ್ಟಿರುತ್ತವೆ.
ರಷ್ಯಾದ ತೈಲ ಖರೀದಿ ಮೂಲಕ ಭಾರತ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಫಂಡಿಂಗ್ ಮಾಡುತ್ತಿದೆ ಎಂಬುದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂಬಿಕೆಯಾಗಿದೆ. ಈ ಹಿನ್ನೆಲೆ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಟ್ರಂಪ್ ಹಾಗೂ ಅಮೆರಿಕದ ರಾಜತಾಂತ್ರಿಕರೂ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಆದರೆ ಭಾರತವು ರಷ್ಯಾದಿಂದ ತೈಲ ಖರೀದಿಯನ್ನ ಮುಂದುವರಿಸಿದೆ. ಹೀಗಾಗಿ ಟ್ರಂಪ್ ಆ. 27ರಿಂದ ಜಾರಿಗೆ ಬರುವಂತೆ ಹೆಚ್ಚುವರಿ 25% ಸುಂಕ ವಿಧಿಸಿದ್ದಾರೆ.
ಭಾರತೀಯ ರಫ್ತುದಾರರು ಎದುರಿಸುತ್ತಿರುವ ಪರಿಣಾಮಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ಪ್ರಧಾನಿ ಕಚೇರಿ ಮಹತ್ವದ ಸಭೆ ನಡೆಸಲು ಮುಂದಾಗಿದೆ.