ನವದೆಹಲಿ, ಆ. 25 (DaijiworldNews/AA): ಪ್ರಧಾನಿ ನರೇಂದ್ರ ಮೋದಿಯವರ ಪದವಿಯ ವಿವರಗಳನ್ನು ಬಹಿರಂಗಪಡಿಸುವ ಅವಶ್ಯಕತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ಇದೇ ವೇಳೆ ಮಾಹಿತಿ ಬಿಡುಗಡೆಗೆ ನಿರ್ದೇಶನ ನೀಡಿದ್ದ ಕೇಂದ್ರ ಮಾಹಿತಿ ಆಯೋಗದ ಆದೇಶವನ್ನು ರದ್ದು ಮಾಡಿದೆ.

2016 ರಲ್ಲಿ ಕೇಂದ್ರ ಮಾಹಿತಿ ಆಯೋಗ 1978 ರಲ್ಲಿ ದೆಹಲಿ ವಿವಿಯಲ್ಲಿ ಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಿತ್ತು. ಇದೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಂದು ಹೇಳಲಾಗಿತ್ತು. ದೆಹಲಿ ವಿಶ್ವವಿದ್ಯಾಲಯವು ಸಿಐಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿತ್ತು.
ನ್ಯಾಯಮೂರ್ತಿ ಸಚಿನ್ ದತ್ತಾ ಅವರಿದ್ದ ಪೀಠ ಸೋಮವಾರ ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ವೈಯಕ್ತಿಕ ಮಾಹಿತಿಯ ಬಹಿರಂಗಗೊಳಿಸುವಿಕೆಯು ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಬಹುದು. ಈ ಸಂದರ್ಭದಲ್ಲಿ, ಮಾಹಿತಿ ಬಹಿರಂಗಗೊಳಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿಲ್ಲ ಎಂದು ಪೀಠ ತಿಳಿಸಿದೆ.
ದೆಹಲಿ ವಿಶ್ವವಿದ್ಯಾಲಯವು, ಪ್ರಧಾನಿ ಮೋದಿಯವರ ಶೈಕ್ಷಣಿಕ ದಾಖಲೆಗಳನ್ನು ಬಹಿರಂಗಪಡಿಸುವುದು ಗೌಪ್ಯತೆಯ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿತು. ಈ ವಾದವನ್ನು ಒಪ್ಪಿಕೊಂಡ ಕೋರ್ಟ್ 'ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ, ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿರಬೇಕು. ಈ ಪ್ರಕರಣದಲ್ಲಿ, ಅಂತಹ ಯಾವುದೇ ಹಿತಾಸಕ್ತಿ ಕಂಡುಬಂದಿಲ್ಲ' ಎಂದು ಹೇಳಿದೆ.