ಜೈಪುರ, ಆ. 25 (DaijiworldNews/AA): ರಾಜಸ್ಥಾನದ ಜೋಧ್ಪುರದಲ್ಲಿ ಶಾಲಾ ಶಿಕ್ಷಕಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಮ್ಮ 3 ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದವರನ್ನು ಸಂಜು ಬಿಷ್ಣೋಯಿ ಹಾಗೂ 3 ವರ್ಷದ ಮಗು ಯಶಸ್ವಿ ಎಂದು ಗುರುತಿಸಲಾಗಿದೆ.
ಬೆಂಕಿಯಲ್ಲಿ ಬೆಂದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಹಿಳೆ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ, ಅತ್ತಿಗೆ ಕಿರುಕುಳ ನೀಡುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಡೆತ್ನೋಟ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಮದು ತಿಳಿದುಬಂದಿದೆ.
ಡೆತ್ನೋಟ್ನಲ್ಲಿ ಗಣಪತ್ ಸಿಂಗ್ ಎಂಬ ವ್ಯಕ್ತಿಯ ಮೇಲೂ ಕಿರುಕುಳ ಆರೋಪ ಮಾಡಿದ್ದು, ಆತ ಸಹ ಪತಿ ಜೊತೆ ಸೇರಿ ಕಿರುಕುಳ ಕೊಡುತ್ತಿದ್ದ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಆತನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಆ. 22ರಂದು ಶಾಲೆಯಿಂದ ಬಂದ ಮಹಿಳೆ ತನ್ನ ಮಗಳ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಪತಿ, ಅತ್ತೆ-ಮಾವ ಮನೆಯಲ್ಲಿ ಇರಲಿಲ್ಲ. ನೆರೆಹೊರೆಯವರು ಮನೆಯಿಂದ ಹೊಗೆ ಬರುವುದನ್ನು ಗಮನಿಸಿ ಪೊಲೀಸರು ಮತ್ತು ಕುಟುಂಬಕ್ಕೆ ತಿಳಿಸಿದ್ದಾರೆ. ಬಳಿಕ ಬಾಗಿಲು ತೆಗೆದು ನೋಡುವಾಗ ಮಗು ಸಾವನ್ನಪ್ಪಿತ್ತು. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ವೇಳೆ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ತಾಯಿ ಮತ್ತು ಮಗಳ ಅಂತ್ಯಕ್ರಿಯೆಯನ್ನು ಒಟ್ಟಿಗೆ ನಡೆಸಲಾಯಿತು.
ಮಹಿಳೆಯ ತಂದೆ ಒಮರಮ್ ಬಿಷ್ಣೋಯ್ ನೀಡಿದ ದೂರಿನ ಅನ್ವಯ, ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿದೆ.