ಕೊಪ್ಪಳ, ಆ. 24 (DaijiworldNews/TA): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಅವಹೇಳನಕಾರಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಯುವಕನನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ. ಮುಸಲಾಪುರ ಗ್ರಾಮದ ನಿವಾಸಿ ಹುಸೇನಿ ಎಂಬ ಯುವಕನನ್ನು ಬಂಧಿಸಲಾಗಿದ್ದು, ಈತನ ವಿರುದ್ಧ ಬಿಎನ್ಎಸ್ 2003ರ ಸೆಕ್ಷನ್ 353(1)(ಸಿ), 353(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋದಲ್ಲಿ “ನೀನು ಬೂಟು ನೆಕ್ಕಿದ ವಂಶಸ್ಥ” ಎಂಬ ಶಬ್ದ ಬಳಸಿ ಅವಹೇಳನಕಾರಿ ಭಾವನೆ ವ್ಯಕ್ತಪಡಿಸಿದ್ದ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮುಸಲಾಪುರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿ, ಯತ್ನಾಳ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಯುವಕ ಕ್ಷಮೆ ಕೇಳಿದರೂ, ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.
ಯತ್ನಾಳ್ ಅವರ ಹೇಳಿಕೆಗಳು ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಿದ ಯುವಕರ ನಡೆ, ಎರಡೂ ಸಾಮಾಜಿಕ ಸಮೂಹಗಳಲ್ಲಿ ಸದುಪಯೋಗ ಅಥವಾ ದುರ್ಬಳಕೆ ಆಗುತ್ತಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.