ಬೆಂಗಳೂರು, ಆ. 02 (DaijiworldNews/AK): ರಾಹುಲ್ ಗಾಂಧಿಯವರು ಚುನಾವಣಾ ಅಕ್ರಮದ ಹೇಳಿಕೆಯ ಮೂಲಕ ದೇಶ ಮತ್ತು ರಾಜ್ಯದ ಮತದಾರರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಮತ್ತು ಸಂವಿಧಾನ ವಿರೋಧಿ ನಡೆಯನ್ನು ಖಂಡಿಸಿ ಬಿಜೆಪಿ ವತಿಯಿಂದ ಆ. 5ರಂದು ಬೆಳಿಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧೀಜಿ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಪ್ರಕಟಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ನೀಡಲಿದ್ದೇವೆ ಎಂದು ತಿಳಿಸಿದರು. ರಾಹುಲ್ ಗಾಂಧಿಯವರು ಇದೇ 5ರಂದು ಬೆಂಗಳೂರಿನಲ್ಲಿ ನಾಟಕ ಮಾಡಲು ಹೊರಟಿದ್ದಾರೆ ಎಂದು ದೂರಿದರು.ಪಕ್ಷದ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಜನರಿಗೆ ತಿಳಿಸುವ ಉದ್ದೇಶವಿದೆ ಎಂದು ಹೇಳಿದರು.
ರಾಹುಲ್ ಗಾಂಧಿಯವರು ಬರುತ್ತಾರೆಂಬ ಕಾರಣಕ್ಕೆ ರಾಜ್ಯ ಸರಕಾರವು ನಿನ್ನೆ ಫ್ರೀಡಂ ಪಾರ್ಕಿನಲ್ಲಿ ಕಾಂಪೌಂಡನ್ನು ಒಡೆದು ಹಾಕಿ ಅಲ್ಲಿದ್ದ ಮರವನ್ನೂ ಕಡಿದು ಹಾಕಿಸಿದೆ. ರಾಹುಲ್ ಗಾಂಧಿ, ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಒಂದು ಹೊಸ ಚರ್ಚೆ ಮತ್ತು ಹೊಸ ವರಸೆ ಪ್ರಾರಂಭ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯವೂ ಒಳಗೊಂಡಂತೆ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ; ಬಿಜೆಪಿ, ಚುನಾವಣಾ ಆಯೋಗದ ದುರ್ಬಳಕೆಯನ್ನು ಮಾಡಿಕೊಂಡಿದೆ ಎಂಬ ಆರೋಪವನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕಾಂಗ್ರೆಸ್ಸಿನ ಮಾರ್ಗದರ್ಶನವಿಲ್ಲದ ಕ್ಷಿಪಣಿಯಂತಿರುವ ಸುಪ್ರೀಂ ನಾಯಕ ಆದ ರಾಹುಲ್ ಗಾಂಧಿ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹತಾಶ ರಾಹುಲ್ ಗಾಂಧಿಯವರ ಕಪಟ ನಾಟಕ
ರಾಹುಲ್ ಗಾಂಧಿ ಅವರು ಗೊಂದಲದಲ್ಲಿದ್ದಾರೆ. ಸೋಲಿನ ಅವಮಾನ ಮತ್ತು ಹತಾಶರಾಗಿ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ಈ ದೇಶದ ಜನರ ವಿಶ್ವಾಸವನ್ನು ಪಡೆದುಕೊಳ್ಳುವಲ್ಲಿ ವಿಫಲರಾದ ರಾಹುಲ್ ಗಾಂಧಿಯವರು ಒಂದು ಕಪಟ ನಾಟಕವನ್ನು ಪ್ರಾರಂಭ ಮಾಡಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು.
ಚುನಾವಣೆಗಳಲ್ಲಿ ಅಕ್ರಮ ನಡೆದಿರುವುದಕ್ಕೆ ನನ್ನ ಬಳಿ 100 ಪ್ರತಿಶತ ಪುರಾವೆ ಇದೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಹೇಳಿಕೆಗೆ ಧ್ವನಿಗೂಡಿಸಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಚುನಾವಣೆಯಲ್ಲಿ ಅಕ್ರಮವಾಗಿರುವ ಬಗ್ಗೆ ಮತ್ತು ಚುನಾವಣಾ ಆಯೋಗದಲ್ಲಿ ದುರ್ಬಳಕೆ ಆಗಿದೆ ಎನ್ನುವ ಮಾಹಿತಿ ಅಥವಾ ಪುರಾವೆ ಇದ್ದರೆ. ಅದನ್ನು ರಾಜ್ಯ ಹೈಕೋರ್ಟಿಗೆ ಅಥವಾ ಸುಪ್ರೀಂ ಕೋರ್ಟಿಗೆ ಪುರಾವೆಗಳನ್ನು ನೀಡಿ ಪ್ರಶ್ನಿಸಬಹುದಾಗಿತ್ತು ಎಂದು ಆಕ್ಷೇಪಿಸಿದರು.