ಬೆಂಗಳೂರು, ಆ. 01 (DaijiworldNews/AK): ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.

ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದರು. ಇಂದು ದೋಷಿ ಎಂದು ತೀರ್ಪು ಪ್ರಕಟಿಸಿದೆ. ಈಗಾಗಲೇ 14 ತಿಂಗಳುಗಳನ್ನು ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ರೇವಣ್ಣ ಅವರು ಜೈಲಿನಲ್ಲಿಯೇ ಇರಲಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 2 ರ ಶನಿವಾರ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಘೋಷಿಸಿದೆ.
ಆದರೆ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಏನು? ಎಷ್ಟು? ಎಂಬುದನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ. ಕನಿಷ್ಠ 10 ವರ್ಷ, ಗರಿಷ್ಠ ಜೀವಾವಧಿ ಶಿಕ್ಷೆಗೆ ಒಳಪಡುವ ಸಾಧ್ಯತೆ ಇದೆ. ಜಡ್ಜ್ ಸಂತೋಷ್ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಪ್ರಜ್ವಲರ್ ರೇವಣ್ಣ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.
ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜುಲೈ 30 ರಂದೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಬೇಕಿತ್ತು. ಆದರೆ, ಕೆಲವೊಂದು ಸ್ಪಷ್ಟೀಕರಣ ಬೇಕಿದ್ದರಿಂದ ತೀರ್ಪನ್ನು ಕಾಯ್ದಿರಿಸುತ್ತಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದರು.
ಕೆಆರ್ ನಗರದ ಮಹಿಳೆ ಅಪಹರಣ ಪ್ರಕರಣದಲ್ಲಿ ಹೆಚ್ಡಿ ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಈಗಾಗಲೇ ಜಾಮೀನು ದೊರೆತಿದೆ. ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಪ್ರಕರಣ ಸಂಬಂಧ 2024ರ ಮೇ 31ರಂದು ಪ್ರಜ್ವಲ್ ರೇವಣ್ಣರನ್ನು ಪೊಲೀಸರು ಬಂಧಿಸಿದ್ದರು.