ಬೆಂಗಳೂರು, ಜು. 24 (DaijiworldNews/AK): ಸ್ಮಾರ್ಟ್ ಮೀಟರ್ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಬೇಕು; ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಿರೀಟಕ್ಕೆ ಈ ಭ್ರಷ್ಟಾಚಾರ ಹಗರಣವು ಮತ್ತೊಂದು ಹೊಸ ಗರಿ ಎಂದರು. ಈ ವಿಚಾರದಲ್ಲಿ ಮುಖ್ಯಮಂತ್ರಿಗಳ ಉತ್ತರವೇನು ಎಂದು ಪ್ರಶ್ನಿಸಿದರು.
15 ಸಾವಿರ ಕೋಟಿ ಎಂದರೆ ಸಣ್ಣ ಮೊತ್ತವಲ್ಲ. ಹಾಗಾಗಿ ಅವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು. ಇದರ ಹಿಂದೆ ದ್ವೇಷ, ವೈಮನಸ್ಸು ಇಲ್ಲ; ಜನರ ಹಿತ ಕಾಪಾಡಲು ಮತ್ತು ಪಕ್ಷಕ್ಕೆ ಗೌರವ ತರುವ ರೀತಿಯಲ್ಲಿ ಈ ಕೆಲಸ ನಡೆದಿದೆ. ಸದನದಲ್ಲೂ ಇದನ್ನು ಗಮನ ಸೆಳೆಯುವ ಪ್ರಶ್ನೆ ಮೂಲಕ ಪ್ರಸ್ತಾಪಿಸಿದ್ದೇವೆ. ಆದರೆ, ಅವರು ಸಮರ್ಪಕ ಉತ್ತರ ನೀಡಿಲ್ಲ ಎಂದು ಟೀಕಿಸಿದರು.
ಅರ್ಹತೆ ಇಲ್ಲದ ಗುತ್ತಿಗೆದಾರನಿಗೆ ಗುತ್ತಿಗೆ, ಬ್ಲ್ಯಾಕ್ ಲಿಸ್ಟೆಡ್ ಕಂಪೆನಿ ಜೊತೆ ಒಡಂಬಡಿಕೆ, ನಿಯಮಾವಳಿ ಉಲ್ಲಂಘನೆ ಮಾಡಿದ್ದನ್ನು ಹಾಗೂ ರಾಷ್ಟ್ರದಲ್ಲೇ ಗರಿಷ್ಠ- ದುಬಾರಿ ದರ ವಿಧಿಸುತ್ತಿರುವುದು, ಕಡ್ಡಾಯ ಇಲ್ಲದಿದ್ದರೂ ಕಡ್ಡಾಯ ಮಾಡಿದ್ದನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದೇವೆ ಎಂದು ಗಮನ ಸೆಳೆದರು.
ಖಾಸಗಿ ದೂರು (ಪಿಸಿಆರ್) ಮಾಡಲು ಒಪ್ಪಿಗೆ ಲಭಿಸಿದೆ. ನಿನ್ನೆ ಸಂಜೆ ಇದರ ಮೌಖಿಕ ಆದೇಶ ಸಿಕ್ಕಿದೆ. ಲೋಕಾಯುಕ್ತರಿಗೂ ತಿಳಿಸಲು ಸೂಚಿಸಿದ್ದಾರೆ ಎಂದ ಅವರು, ಈಗಿನ ಗುತ್ತಿಗೆಯನ್ನು ಕೈಬಿಡಬೇಕು. ಅಧಿಕಾರ ದುರ್ಬಳಕೆ ಕಾಣುತ್ತಿದೆ. ಕೆ.ಜೆ.ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯವನ್ನು ಮುಂದಿಟ್ಟರು. ಸಿದ್ದರಾಮಯ್ಯನವರೇ ಎಲ್ಲಿದ್ದೀರಿ? ನಿಮ್ಮ ನಿಲುವೇನು? ಸ್ಪಷ್ಟನೆ ಏನು? ನಿಮ್ಮ ಮೇಲೆ, ನಿಮ್ಮ ಸರಕಾರದ ಮೇಲೆ ಸಾಕಷ್ಟು ಆಪಾದನೆಗಳಿವೆ ಎಂದು ಟೀಕಿಸಿದರು.
ಪಿ.ಸಿ.ಆರ್ ದಾಖಲಾದುದು ಗೊತ್ತಾದ ಮೇಲಾದರೂ ರಾಜೀನಾಮೆ ಕೊಡುವಿರಾ ಜಾರ್ಜ್ ಅವರೇ ಎಂದು ಕೇಳಿದರು. ನ್ಯಾಯಕ್ಕೆ ತಲೆ ಬಾಗುವುದಾಗಿ ಹೇಳಿದವರು ತಕ್ಷಣ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಸದನದಲ್ಲೂ ಈ ವಿಚಾರದ ಕುರಿತು ಹೋರಾಟ ಮಾಡುವ ಬಗ್ಗೆ ಪ್ರತಿಪಕ್ಷ ನಾಯಕರ ಜೊತೆ ಸಮಾಲೋಚನೆ ಮಾಡುವುದಾಗಿ ಪ್ರಶ್ನೆಗೆ ಉತ್ತರಿಸಿದರು.