ಬೆಂಗಳೂರು, ಜು. 24 (DaijiworldNews/AA): ಗೋವಾ ಸಿಎಂ ಪ್ರಮೋದ್ ಸಾವಂತ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಒಕ್ಕೂಟ ವ್ಯವಸ್ಥೆ ಬಗ್ಗೆ ಅರಿವು ಇಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿದಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ಯೋಜನೆ ವಿಚಾರದಲ್ಲಿ ಒಗ್ಗಟ್ಟಾಗಿ ಹೋರಾಡಬೇಕು. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ, 28 ಸಂಸದರು ಇದ್ದೇವೆ. ಇಂತಹ ಸಂದರ್ಭದಲ್ಲಿ ಬಾಯಿ ಮುಚ್ಚಿ ಕುಳಿತುಕೊಳ್ಳುವುದು ತಪ್ಪು. ಕರ್ನಾಟಕದ ಪರವಾಗಿ ಗೌರವ ಉಳಿಸಿಕೊಳ್ಳೋಕೆ ಒಂದಾಗಬೇಕು. ಒಂದು ಎಂಪಿಗಾಗಿ ನಾವು ರಾಜ್ಯವನ್ನು ಮಾರಿಕೊಳ್ಳಲು ಸಿದ್ಧವಿಲ್ಲ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಹದಾಯಿ ಯೋಜನೆ ವಿಚಾರವಾಗಿ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಿಗೆ ಮನವಿ ಮಾಡುತ್ತೇವೆ. ಫಾರೆಸ್ಟ್ ಕ್ಲಿಯರನ್ಸ್ ಬಗ್ಗೆ ಕೇಂದ್ರ ಸಚಿವರ ಜೊತೆ ಮಾತಾಡುವೆ. ಈ ವಿಚಾರದಲ್ಲಿ ಕೇಂದ್ರ ಜಲಶಕ್ತಿ, ಅರಣ್ಯ ಸಚಿವರು ರಾಜಕೀಯ ಮಾಡಲ್ಲ. ಈ ವಿಚಾರದಲ್ಲಿ ಗೋವಾ ರಾಜಕೀಯ ಮಾಡುತ್ತಿದೆ ಎಂದರು.
ಇನ್ನು ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರಿಗೆ ಒಕ್ಕೂಟ ವ್ಯವಸ್ಥೆ ಬಗ್ಗೆ ಅರಿವು ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಈಗಾಗಲೇ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಟೆಂಡರ್ ಕರೆದಿದ್ದೇವೆ. ಯೋಜನೆ ಸಂಬಂಧ ನಮಗೆ ಫಾರೆಸ್ಟ್ ಕ್ಲಿಯರೆನ್ಸ್ ಬೇಕಾಗಿದೆ. ಅವರು ನೋಟಿಸ್ ಆದರೂ ನೀಡಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ನಾವು ಸುಪ್ರೀಂಕೋರ್ಟ್ನಲ್ಲಿ ಹಾಕಿದ ಅರ್ಜಿ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ.