ದೆಹಲಿ, ಜು. 22 (DaijiworldNews/AK): ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿ(ಎಸ್ಸಿ) ಪಟ್ಟಿಯಲ್ಲಿ ಸೇರಿಸಲು ಕರ್ನಾಟಕ ಸರ್ಕಾರದಿಂದ ಕೇಂದ್ರಕ್ಕೆ ಯಾವುದೇ ಶಿಫಾರಸು ಬಂದಿಲ್ಲ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಖಾತೆ ಸಚಿವ ರಾಮದಾಸ್ ಅಠಾವಳೆ ತಿಳಿಸಿದ್ದಾರೆ.

ಕುಡುಬಿ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಬಂದಿರುವ ಪ್ರಸ್ತಾವನೆ ಹಾಗೂ ಈ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿಗಳ ಕುರಿತು ನಡೆಸಿರುವ ಅಧ್ಯಯನ ವಿಚಾರವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಈ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಶಿಫಾರಸು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪರಿಶಿಷ್ಟ ಜಾತಿಗಳನ್ನು ಸಂವಿಧಾನದ 341ನೇ ವಿಧಿಯ ನಿಬಂಧನೆಗಳ ಅಡಿಯಲ್ಲಿ ಸೂಚಿಸಲಾಗುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರ್ಪಡೆ ಅಥವಾ ಹೊರಗಿಡುವಿಕೆ ಮತ್ತು ಇತರ ಮಾರ್ಪಾಡುಗಳಿಗಾಗಿ, ಅಸ್ತಿತ್ವದಲ್ಲಿರುವ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಪರಿಷ್ಕರಿಸಲು ಆ ಜನಾಂಗದ ಅಧ್ಯಯನದೊಂದಿಗೆ ಸಂಪೂರ್ಣ ಪ್ರಸ್ತಾವನೆಯನ್ನು ಸಂಬಂಧಪಟ್ಟ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ನೀಡಬೇಕು. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿಗಳ ಮೊದಲ ಪಟ್ಟಿಯನ್ನು ರಾಷ್ಟ್ರಪತಿಗಳ ಆದೇಶದ ಮೂಲಕ ಸೂಚಿಸಲಾಗುತ್ತದೆ. ಅದರಲ್ಲಿ ಯಾವುದೇ ಆ ನಂತರದ ಮಾರ್ಪಾಡುಗಳನ್ನು ಸಂಸತ್ತಿನ ಕಾಯ್ದೆ ಮೂಲಕ ಮಾತ್ರ ಮಾಡಬಹುದು. ಆದರೆ ಕುಡುಬಿ ಸಮಾಜವನ್ನು ಎಸ್ಸಿ ಪಟ್ಟಿಗೆ ಸೇರ್ಪಡೆಗೆ ಪರಿಗಣಿಸಲು ಈವರೆಗೆ ಕರ್ನಾಟಕ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಉತ್ತರಿಸಿದ್ದಾರೆ.