ಬೆಂಗಳೂರು,ಜು. 22 (DaijiworldNews/AK): ರಾಜ್ಯದ ಕಾಂಗ್ರೆಸ್ ಸರ್ಕಾರವು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡುವ ಮೂಲಕ ಡಿಜಿಟಲ್ ಇಂಡಿಯಾ ಅನ್ನು ಹಿಮ್ಮೆಟ್ಟಿಸುವುದಕ್ಕೆ ಷಡ್ಯಂತ್ರ ಮಾಡಿದೆ ಎಂಬ ಅನುಮಾನ ಉಂಟಾಗುತ್ತಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದ’ಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಐ ಪಾವತಿಯಲ್ಲಿ ಜಾಗತಿಕ ದಾಖಲೆ ಬರೆದಿದೆ. ಆದರೆ ಕಾಂಗ್ರೆಸ್ ಸರ್ಕಾರದವರು ಜನರಿಗೆ ಆತಂಕ ಮತ್ತು ಭಯದ ವಾತಾವರಣ ನಿರ್ಮಿಸಿದ್ದಾರೆ. ಅಂದರೆ ಕೇಂದ್ರದ ಸರ್ಕಾರದ ಡಿಜಿಟಲ್ ವಹಿವಾಟು ಯೋಜನೆಯ ಪ್ರಯತ್ನಕ್ಕೆ ಭಯ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ನೋಟಿಸ್ ಪರಿಣಾಮದಿಂದ ಸಣ್ಣ ವ್ಯಾಪಾರಿಗಳು ಭಯಗೊಂಡು ಯುಪಿಐ ಪಾವತಿ ಇಲ್ಲ; ನಗದು ಮಾತ್ರ ಎಂದು ಬೋರ್ಡ್ ಹಾಕಿದ್ದಾರೆ. ಭಯಪಡಿಸಿದ ಪರಿಣಾಮ ಮಧ್ಯವರ್ತಿಗಳು ಮತ್ತು ಕೆಲವು ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟಿರುವ ದೂರು ಕೂಡ ಬಂದಿದೆ. ಆದಕಾರಣ ರಾಜ್ಯ ತೆರಿಗೆ ಇಲಾಖೆ ನೀಡಿರುವ ನೋಟಿಸನ್ನು ಸರ್ಕಾರ ಹಿಂಪಡೆದು ಭಯದ ವಾತಾವರಣದಿಂದ ಸಣ್ಣ ವ್ಯಾಪಾರಿಗಳನ್ನು ಪಾರು ಮಾಡಬೇಕೆಂದು ಅವರು ಆಗ್ರಹಿಸಿದರು.
ರಾಜ್ಯ ಸರಕಾರದ್ದೇ ಕೋತಿಯ ಪಾತ್ರ..
ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸಲುವಾಗಿ ಹಣಕಾಸು ಇಲಾಖೆಯ ಸಭೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ಕೊಟ್ಟಿದ್ದಾರೆ. ಸಿದ್ದರಾಮಯ್ಯ ನಿರ್ದೇಶನದ ಮೇಲೆಯೆ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು. ಉಪ ಮುಖ್ಯಮಂತ್ರಿಗಳು ಹೇಳಿದ ರೀತಿಯಲ್ಲಿ ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿದ ಹಾಗೆ ಇದೆ. ಆದರೆ ಇಲ್ಲಿ ಕೋತಿ ಯಾರು ಎಂದು ಪ್ರಶ್ನಿಸಿದರು.
ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಕೇಂದ್ರವನ್ನು ಏಕೆ ದೂರುತ್ತಿದ್ದೀರಿ ಎಂದು ಕೇಳಿದರು. ಇಲ್ಲಿ ಕೋತಿ ಕೆಲಸವನ್ನು ಮಾಡಿರುವುದು ನೀವು ಕೇಂದ್ರದ ಮೇಲೆ ತಪ್ಪು ಬರುವ ರೀತಿಯಲ್ಲಿ ನಿಮ್ಮ ಹೇಳಿಕೆಗಳು ತಪ್ಪು ಸಂದೇಶ ಕೊಡುತ್ತಿವೆ ಎಂದು ತಿಳಿಸಿದರು.