ಉತ್ತರ ಪ್ರದೇಶ, ಜು. 12 (DaijiworldNews/AK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿ ಪರೀಕ್ಷೆಯನ್ನು ಕೆಲ ಅಭ್ಯರ್ಥಿಗಳು ಕೇವಲ ಒಂದೇ ಒಂದು ಪ್ರಯತ್ನದಲ್ಲಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲ ಅಭ್ಯರ್ಥಿಗಳು ಎರಡು, ಮೂರು ಅಥವಾ ಅದಕ್ಕಿಂತ ಹೆಚ್ಚು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಸತತ ನಾಲ್ಕು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿ ತನ್ನ ಐದನೇ ಪ್ರಯತ್ನದಲ್ಲಿ ಉತ್ತೀರ್ಣರಾದ ತೃಪ್ತಿ ಕಲ್ಹನ್ಸ್ ಅವರ ಯಶೋಗಾಥೆ ಇದು.

ತೃಪ್ತಿ ಕಲ್ಹನ್ಸ್ ಅವರು ಉತ್ತರ ಪ್ರದೇಶದ ಗೊಂಡಾ ಮೂಲದವರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಫಾತಿಮಾ ಶಾಲೆಯಲ್ಲಿ ಪೂರ್ಣಗೊಳಿಸಿದರು. ಶಾಲಾ ದಿನಗಳಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂಬುದು ತೃಪ್ತಿ ಅವರ ಕನಸಾಗಿತ್ತು.
ನಂತರ ತೃಪ್ತಿ ಅವರು 2017ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರೂ ಕಾಲೇಜಿನಿಂದ ಬ್ಯಾಚುಲರ್ ಆಫ್ ಕಾಮರ್ಸ್ ಆನರ್ಸ್ ಪದವಿಯನ್ನು ಪಡೆದರು. ಪದವಿ ಪೂರ್ಣಗೊಳಿಸಿದ ನಂತರ, ತೃಪ್ತಿ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಯಾವುದೇ ತರಬೇತಿ ಸಂಸ್ಥೆಗೆ ಸೇರದೆ ಸ್ವಯಂ ಅಧ್ಯಯನವನ್ನು ಮಾಡಿದರು.
ತೃಪ್ತಿ ಅವರು ತಮ್ಮ ಮೊದಲ ಮೂರು ಪ್ರಯತ್ನಗಳಲ್ಲಿ, ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆಯನ್ನೂ ಪಾಸ್ ಮಾಡಲು ಸಾಧ್ಯವಾಗಲಿಲ್ಲ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರಿತು. ಇದರಿಂದಾಗಿ ಅವರು ಖಿನ್ನತೆಗೆ ಒಳಗಾಗಿ ಆತ್ಮವಿಶ್ವಾಸವನ್ನು ಕಳೆದುಕೊಂಡರು. ಜೊತೆಗೆ ಪೂರ್ವಭಾವಿ ಪರೀಕ್ಷೆಯಲ್ಲಿ ಸಹ ಉತ್ತೀರ್ಣರಾಗದ ಕಾರಣ ಕುಟುಂಬದವರು ಒತ್ತಡ ಹೇರಲು ಪ್ರಾರಂಭಿಸಿದರು. ಆದಾಗ್ಯೂ, ತೃಪ್ತಿ ಐಎಎಸ್ ಅಧಿಕಾರಿಯಾಗಬೇಕೆಂಬ ಆಲೋಚನೆಯ ಹೊರತಾಗಿ ಬೇರೆ ಯಾವುದೇ ಪರ್ಯಾಯ ಆಯ್ಕೆಯನ್ನು ಇಟ್ಟುಕೊಂಡಿರಲಿಲ್ಲ.
2021ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ತೃಪ್ತಿ ಅವರು, ಈ ಬಾರಿಯೂ ಉತ್ತೀರ್ಣರಾಗುವಲ್ಲಿ ವಿಫಲರಾದರು. ಇದಾದ ಬಳಿಕ 2022ರ ಯುಪಿಎಸ್ಸಿ ಪರೀಕ್ಷೆಯಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರು. ಈ ವೇಳೆ ತಾನು ಪರೀಕ್ಷೆಯ ತಯಾರಿಯಲ್ಲಿ ಮಾಡಿದ ತಪ್ಪನ್ನು ಅರಿತರು. ಹೀಗಾಗಿ ತಮ್ಮ ಐಚ್ಛಿಕ ವಿಷಯವನ್ನು ಸಾರ್ವಜನಿಕ ಆಡಳಿತದಿಂದ ಮಾನವಶಾಸ್ತ್ರಕ್ಕೆ ಬದಲಾಯಿಸಿದರು. 2023 ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ತಮ್ಮ ಐದನೇ ಪ್ರಯತ್ನದಲ್ಲಿ 199ನೇ ಅಖಿಲ ಭಾರತ ರ್ಯಾಂಕ್ ಗಳಿಸಿ ಉತ್ತೀರ್ಣರಾಗುವಲ್ಲಿ ಯಶಸ್ವಿಯಾದರು. ಈ ಮೂಲಕ ಅಂತಿಮವಾಗಿ ತಮ್ಮ ಐಎಎಸ್ ಅಧಿಕಾರಿಯಾಗಬೇಕೆಂಬ ತಮ್ಮ ಕನಸನ್ನು ನನಸಾಗಿಸಿಕೊಂಡರು.