ನವದೆಹಲಿ, ಜು. 10 (DaijiworldNews/AA): ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಇಂದು ಬೆಳಗ್ಗೆ 4.4 ತೀವ್ರತೆ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಬೆಳಗ್ಗೆ 9:04ರ ಸುಮಾರಿಗೆ ಭೂಮಿ ಕಂಪಿಸಿದ್ದು, ಒಂದು ನಿಮಿಷ ಕಾಲ ಭೂಕಂಪನದ ಅನುಭವವಾಗಿದೆ. ಹರಿಯಾಣದ ಜಜ್ಜರ್ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ಇದು ದೆಹಲಿಯಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ದೆಹಲಿಯಲ್ಲಿ ಮಾತ್ರವಲ್ಲದೇ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದ ಪರಿಣಾಮ ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿ ಹಾಗೂ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.