ಮೈಸೂರು, ಜು. 10 (DaijiworldNews/AA): ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ. ಸಿಎಂ ಬದಲಾವಣೆ ಚರ್ಚೆ ಹೈಕಮಾಂಡ್ ಮುಂದೆ ನಡೆದಿಲ್ಲ. ಎಐಸಿಸಿ ಕಾರ್ಯದರ್ಶಿ ಈಗಾಗಲೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಓಬಿಸಿ ಸಮಿತಿಗೆ ಸಿಎಂ ಆಯ್ಕೆ ಕುರಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾರ್ರಿ ಹೇಳಿದ್ದು ಮುಖ್ಯಮಂತ್ರಿ ಆದವರನ್ನ ಓಬಿಸಿ ಕಮಿಟಿಗೆ ಕಳುಹಿಸಿದ್ರೆ ಪ್ರಮೋಷನ್ನಾ? ಅಂತ ಕೆಂಡಾಮಂಡಲರಾದರು. ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ. ದೇಶದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಆ ಕಮಿಟಿಯಲ್ಲಿದ್ದಾರೆ. ಹಾಗಾಗಿ ಅಲ್ಲಿ ಸದಸ್ಯರಾಗಿರುತ್ತಾರೆ. ಅದಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಸಂಬಂಧ ಕಲ್ಪಿಸುವ ಅಗತ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಹೇಳೋದನ್ನೆಲ್ಲ ನೀವು ನಂಬಿದ್ರೆ ಆಗಲ್ಲ. ನಮ್ಮ ಸರ್ಕಾರ ಬಂದಾಗಿಂದ ಸರ್ಕಾರ ಬದಲಾಗುತ್ತೆ, ಸಿಎಂ ಬದಲಾಗ್ತಾರೆ ಅಂತಿದ್ದಾರೆ. ನವೆಂಬರ್ ತಿಂಗಳಿಗೆ ನಮ್ಮ ತಂದೆ ಎರಡೂವರೆ ವರ್ಷ ಪೂರೈಕೆ ಮಾಡ್ತಾರೆ. ಹಾಗಾಗಿ ಸಿಎಂ ಆಸೆ ಇಟ್ಟುಕೊಂಡಿರೋರು ಕೇಳ್ತಾರೆ. ಕೇಳೋದ್ರಲ್ಲ ತಪ್ಪಿಲ್ಲ, ತೀರ್ಮಾನ ಮಾಡೋದು ಹೈಕಮಾಂಡ್ ಹಾಗೂ ಶಾಸಕರು. ಸರ್ಕಾರ ಬಂದಾಗಿದ ಈ ಪ್ರಶ್ನೆಗೆ ಉತ್ತರ ಮಾಡುತ್ತಿದ್ದೇನೆ ದಯವಿಟ್ಟು ಆ ಪ್ರಶ್ನೆ ಕೇಳಬೇಡಿ ಎಂದರು.