ನವದೆಹಲಿ, ಜೂ. 14 (DaijiworldNews/AA): ಅಮೆರಿಕ ಮೂಲದ ಆಕ್ಸಿಯಮ್ ಸ್ಪೇಸ್ ಇದೇ 19 ರಂದು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲು ಸಜ್ಜಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸ್ಪಷ್ಟಪಡಿಸಿದೆ.

ಆಕ್ಸಿಯಮ್ ಸ್ಪೇಸ್ ಮಿಷನ್ ಜೂನ್ 11ರಂದು ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ಆದರೆ ಸ್ಪೇಸ್ಎಕ್ಸ್ನ ಫಾಲ್ಕನ್-9 ರಾಕೆಟ್ನಲ್ಲಿ ಇಂಧನ ಸೋರಿಕೆ ಮತ್ತು ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ರಷ್ಯಾದ ವಿಭಾಗದಲ್ಲಿ ಸೋರಿಕೆಯಿಂದಾಗಿ ಉಡಾವಣೆ ವಿಳಂಬವಾಯಿತು.
ಆಕ್ಸಿಯಮ್ ಸ್ಪೇಸ್ ಮತ್ತು ಸ್ಪೇಸ್ಎಕ್ಸ್ ನಡುವಿನ ಅನುಸರಣಾ ಸಮನ್ವಯ ಸಭೆಯಲ್ಲಿ, ಫಾಲ್ಕನ್ 9 ಉಡಾವಣಾ ವಾಹನದಲ್ಲಿ ಕಂಡುಬರುವ ದ್ರವ ಆಮ್ಲಜನಕ ಸೋರಿಕೆಯನ್ನು ಯಶಸ್ವಿಯಾಗಿ ಪರಿಹರಿಸಲಾಗಿದೆ ಎಂದು ತಂಡಗಳು ಸ್ಪಷ್ಟಪಡಿಸಿವೆಯೆಂದು ಇಸ್ರೋ ದೃಢಪಡಿಸಿದೆ.
ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಜೊತೆಗೆ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ನಡೆಸಲಿದ್ದಾರೆ.