ಅಹಮದಾಬಾದ್, ಜೂ. 12 (DaijiworldNews/AA): ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ 242 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ಸಂಬಂಧಿಸಿದಂತೆ 110 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.


ಗುಜರಾತ್ನ ಅಹಮದಾಬಾದ್ನಲ್ಲಿ ಬೋಯಿಂಗ್ 787-8 ವಿಮಾನ ಪತನಗೊಂಡಿದ್ದು, ಈ ವಿಮಾನವು ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿತ್ತು. ಗಾಯಾಳುಗಳನ್ನು ಅಹಮದಾಬಾದ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೇಘಾನಿ ನಗರದ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಏಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ ಎಂದು ವರದಿಯಾಗಿದೆ.
ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಇಬ್ಬರು ಪೈಲಟ್ಗಳು ಮತ್ತು 2 ಮಕ್ಕಳು ಸೇರಿದಂತೆ 8 ಸಿಬ್ಬಂದಿ ಇದ್ದರು. ಇವರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಪ್ರಯಾಣಿಸುತ್ತಿದ್ದರು. ವಿಮಾನದ ಪೈಲಟ್ನ ಹೆಸರು ಸುಮಿತ್ ಸಭರ್ವಾಲ್ ಹಾಗೂ ಸಹ-ಪೈಲಟ್ ಕ್ಲೈವ್ ಕುಂದರ್ ಎಂದು ಹೇಳಲಾಗುತ್ತಿದೆ.
ನಾಗರಿಕ ವಿಮಾನಯಾನ ಸಚಿವಾಲಯದಿಂದ ಸಹಾಯ ಕೇಂದ್ರ
ವಿಮಾನದ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ.