ಬೆಂಗಳೂರು/ಮಂಗಳೂರು, ಜೂ. 08 (DaijiworldNews/AA): ಮಂಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಪೆ ಸಮೀಪದ ಕಿನ್ನಿಪದವಿನಲ್ಲಿ ಮೇ 1ರಂದು ನಡೆದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.

ರಾಜಕೀಯ ಮತ್ತು ಸಾರ್ವಜನಿಕ ವಲಯದಿಂದ ಹೆಚ್ಚಿದ ಬೇಡಿಕೆಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸುವ ಆದೇಶವನ್ನು ಅಧಿಕೃತವಾಗಿ ಹೊರಡಿಸಿದೆ. ಇದೀಗ ಎನ್ಐಎ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಮೇ.1ರಂದು ರಾತ್ರಿ ಮಂಗಳೂರು ನಗರದ ಬಜ್ಪೆ ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರನ್ನು ಬರ್ಬರವಾಗಿ ತಲ್ವಾರಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಪೊಲೀಸರು ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈವರೆಗೆ 11 ಜನರನ್ನು ಬಂಧಿಸಿದ್ದಾರೆ.