ನವದೆಹಲಿ, ಜೂ. 07 (DaijiworldNews/TA): ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯವರ ಪ್ರಧಾನ ಸಲಹೆಗಾರ (ಮಾಧ್ಯಮ) ನರೇಶ್ ಚೌಹಾಣ್ ಅವರ ಪ್ರಕಾರ, ಹಿರಿಯ ಕಾಂಗ್ರೆಸ್ ನಾಯಕಿಯನ್ನು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದಾಗಿ ಕರೆತರಲಾಗಿದೆ. ಅವರು ಪ್ರಸ್ತುತ ಸ್ಥಿರರಾಗಿದ್ದಾರೆ ಎಂದು ಹೇಳಿದ್ದಾರೆ.
ಅವರ ಜೊತೆ ಅವರ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅವರು ತಮ್ಮ ತಾಯಿಯೊಂದಿಗೆ ಶಿಮ್ಲಾಗೆ ಪ್ರವಾಸಕ್ಕೆ ಆಗಮಿಸಿದ್ದರು. ಸೋನಿಯಾ ಗಾಂಧಿಯವರ ಆರೋಗ್ಯದ ಬಗ್ಗೆ ಐಜಿಎಂಸಿ ಆಡಳಿತ ಮಂಡಳಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಫೆಬ್ರವರಿಯಲ್ಲಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.