ಶ್ರೀಹರಿಕೋಟಾ, ಮೇ. 18 (DaijiworldNews/AA): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ 101 ನೇ ಉಪಗ್ರಹವು ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಫಲವಾಗಿದೆ.

ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ 101ನೇ ಉಪಗ್ರಹ ಉಡಾವಣೆ ಮಾಡಲಾಯಿತು. ಆದರೆ ಉಪಗ್ರಹ ಉಡಾವಣೆಯಾದ ಸ್ವಲ್ಪ ಸಮಯದ ನಂತರ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಫಲವಾಗಿದೆ.
ಪಿಎಸ್ಎಲ್ವಿ-ಸಿ61 ಉಡಾವಣೆ ವಿಫಲವಾದ ಬಗ್ಗೆ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಮಾಹಿತಿ ನೀಡಿದ್ದು, ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ವಿಶ್ಲೇಷಣೆಯ ನಂತರ ನಾವು ಮತ್ತೆ ಮಾಹಿತಿಯನ್ನು ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.
ಭಾನುವಾರ ಬೆಳಗ್ಗೆ 5.59 ಕ್ಕೆ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಮೂಲಕ ಇಸ್ರೋ ಭೂ ವೀಕ್ಷಣಾ ಉಪಗ್ರಹ ಇಒಎಸ್-09 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತು. ಇದಾದ ನಂತರ, ಇಸ್ರೋ ಈ ಕಾರ್ಯಾಚರಣೆ ಪೂರ್ಣಗೊಂಡಿಲ್ಲ ಎಂದು ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಸ್ರೋ, ಇಂದು 101 ನೇ ಉಡಾವಣೆಯನ್ನು ಪ್ರಯತ್ನಿಸಲಾಯಿತು, ಪಿಎಸ್ಎಲ್ವಿ-ಸಿ61 ಕಾರ್ಯಕ್ಷಮತೆ 2 ನೇ ಹಂತದವರೆಗೆ ಸಾಮಾನ್ಯವಾಗಿತ್ತು. 3 ನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗದ್ದು, ಕಾರ್ಯಾಚರಣೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದೆ.
ಇನ್ನು ಇಸ್ರೋ ಉಡಾವಣೆಗೆ ಪ್ರಯತ್ನಿಸಿದ್ದ ಇಒಎಸ್-09 ಉಪಗ್ರಹವು ಯಶಸ್ವಿಯಾಗಿದ್ದರೇ, ನಮಗೆ ಗಡಿ ಕಾಯುವಿಕೆ, ಬೇಹುಗಾರಿಕೆ, ರಾಷ್ಟ್ರೀಯ ಭದ್ರತೆಗೆ ಸಾಥ್ ನೀಡುತ್ತಿತ್ತು. ವಿಪತ್ತು ನಿರ್ವಹಣೆ ಸಮಯದಲ್ಲೂ ಸಹ ನೆರವಾಗುತ್ತಿತ್ತು ಎನ್ನಲಾಗಿದೆ.
