ವಿಜಯಪುರ, ಏ.29 (DaijiworldNews/AK):ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾವಿದ್ದೇವೆ, ಎಲ್ಲ ರಾಜಕೀಯ ಪಕ್ಷಗಳೂ ಇವೆ. ಪಾಕಿಸ್ತಾನದ ವಿರುದ್ಧ ಇಂದಿರಾ ಗಾಂಧಿ ಅವರು ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಮುಖ್ಯಮಂತ್ರಿಗಳು ಯುದ್ಧ ಬೇಡವೇ ಬೇಡ ಎಂದು ಹೇಳಿಲ್ಲ. ಆದ್ರೆ ಯುದ್ಧವೇ ಪರಿಹಾರವಲ್ಲ ಅನ್ನುವ ಅರ್ಥದಲ್ಲಿ ಹೇಳಿದ್ದಾರೆ. ಅವರ ಬಳಿಯೂ ನ್ಯೂಕ್ಲಿಯರ್ ಇದೆ, ಅಣುಬಾಂಬ್ ದಾಳಿಯ ಬೆದರಿಕೆ ಹಾಕ್ತಿದ್ದಾರೆ. ಹಾಗಾಗಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಯುದ್ಧ ಮಾಡಲಿ ಅಂತ ಸಿಎಂ ಹೇಳಿದ್ದಾರೆಂದು ತಿಳಿಸಿದರು.
ಶತ್ರು ರಾಷ್ಟ್ರದ ವಿರುದ್ಧ ಯುದ್ಧ ಆಗಲೇಬೇಕು, ಪಾಕ್ಗೆ ತಕ್ಕ ಶಾಸ್ತಿ ಮಾಡಬೇಕು. ಹಾಗಾಗಿ ಇಂದಿರಾ ಗಾಂಧಿ ಅವರು ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ಆಗಬೇಕು. ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳೂ ಇವೆ ಎಂದು ಭರವಸೆ ನೀಡಿದರು.