ಬೆಂಗಳೂರು,ಏ.28 (DaijiworldNews/AK): ಭ್ರಷ್ಟ ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಕೇಳಿದರೆ ರಾತ್ರಿ ನಿದ್ರೆ ಬರುವುದಿಲ್ಲ ಎಂದು ವಿಧಾನಪರಿಷತ್ ವಿರೋದ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ವರ್ತನೆ, ಮಾತುಗಳನ್ನು ಗಮನಿಸಿದರೆ ನನಗೆ ಒಂದು ವಿಷಯ ನೆನಪಿಗೆ ಬರುತ್ತದೆ; ಒಂದು ಊರಿಗೆ ಆನೆ ಬಂದ ತಕ್ಷಣವೇ ಊರಿನಲ್ಲಿದ್ದ ಎಲ್ಲ ಸಣ್ಣಪುಟ್ಟ ನಾಯಿಗಳು ಬೊಗಳಲು ಶುರುಮಾಡುತ್ತವೆ. ಆದರೆ, ಆನೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ಹೋಗುತ್ತದೆ. ಆದರೆ ನಾಯಿಗಳು ಬೊಗಳುವುದನ್ನು ನಿಲ್ಲಿಸಲೇ ಇಲ್ಲ. ಈ ಕಥೆಯಂತೆ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಇದೆ ಎಂದು ಟೀಕಿಸಿದರು.
ಮೋದಿಯವರ ವಿರುದ್ಧ ಭ್ರಷ್ಟರೆಲ್ಲ ಒಂದಾಗಿದ್ದಾರೆ. ಆದರೆ ಒಂದೇ ಒಂದು ಭ್ರಷ್ಟಾಚಾರವನ್ನು ಮೋದಿಯವರ ವಿರುದ್ಧ ಹೇಳಲು ಯಾರಿಗೂ ಶಕ್ತಿಯಿಲ್ಲ ಎಂದು ಆರೋಪಿಸಿದರು.ದೇಶದಲ್ಲಿ ಜನರ ಮೇಲೆ ಭಯೋತ್ಪಾದನಾ ದಾಳಿಯಾಗಿದೆ. ಅದರಲ್ಲಿ 28 ಜನರು ಸಾವಿಗೀಡಾಗಿದ್ದಾರೆ. ಅವರಲ್ಲಿ ಕರ್ನಾಟಕದವರೂ ಇದ್ದಾರೆ. ಧರ್ಮ ಕೇಳಿ, ಗುರುತು ಕೇಳಿ ನಮ್ಮ ಮೇಲೆ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳೇ ಹೇಳಿದ್ದರೂ ಕಾಂಗ್ರೆಸ್ ನವರು ನಂಬುವುದಿಲ್ಲ. ಆದರೆ, ದಾಳಿಯಲ್ಲಿ ಸಾವನ್ನಪ್ಪಿದ ಜನರ ಮರಣೋತ್ತರ ಪರೀಕ್ಷೆಯಲ್ಲಿ ಜನರನ್ನು ಲಿಂಗ ಪರೀಕ್ಷೆ ಮಾಡಿ ಗುಂಡು ಹಾರಿಸಲಾಗಿದೆ ಎಂದು ನಿನ್ನೆಯ ವರದಿಗಳು ಹೇಳಿವೆ. ಈ ಕಾಂಗ್ರೆಸ್ ನವರಿಗೆ ಮೆದುಳಿಗೂ ಬಾಯಿಗೂ ಏನಾದರೂ ಸಂಪರ್ಕ ತಪ್ಪಿ ಹೋಗಿದೆಯೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಯಾರ ಓಲೈಕೆಗೆ ನಿಂತಿದ್ದೀರಿ ಎಂದು ಪ್ರಶ್ನಿಸಿದ ಅವರು, ಪ್ರಾಣ ಕಳೆದುಕೊಂಡವರ ಪತ್ನಿಯೇ ಹೇಳಿದ ಮಾತುಗಳನ್ನು ಈ ಕಾಂಗ್ರೆಸ್ ನಂಬುವುದಿಲ್ಲ. ಒಬ್ಬ ಸಣ್ಣಪ್ರಾಯದ ಹುಡುಗನ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಭಯೋತ್ಪಾದಕರು ಹಿಂದು ಮತ್ತು ಮುಸ್ಲಿಂ ಬೇರೆಯಾಗಿ ಎಂದು ಹೇಳಿದ ಕೂಡಲೇ ನಾನು ಮತ್ತು ನಮ್ಮ ತಂದೆ ಅವಿತುಕೊಂಡೆವು. ಆದರೂ ಕಂಡುಹಿಡಿದು ಹಿಂದು ಎಂದು ತಿಳಿದ ತಕ್ಷಣವೇ ನನ್ನ ತಂದೆಯವರಿಗೆ ಗುಂಡು ಹಾರಿಸಿ ನನ್ನನ್ನು ಬಿಟ್ಟುಬಿಟ್ಟರು ಎಂದು ವಿವರವಾಗಿ ಹೇಳಿದ ಆ ಪುಟ್ಟ ಹುಡುಗನ ಮಾತಿನ ಮೇಲೆ ನಂಬಿಕೆ ಇಲ್ಲವೇ ನಿಮಗೆ. ಅಂದರೆ ಭಾರತೀಯರ ಮೇಲೆ ನಿಮಗೆ ನಂಬಿಕೆ ಇಲ್ಲ?. ಹಾಗಾದರೆ ನೀವು ನಂಬುವುದು ಯಾರನ್ನು? ಎಂದು ಪ್ರಶ್ನಿಸಿದರು.