ಬೆಳಗಾವಿ, ಏ.26 (DaijiworldNews/AA): ದೇಶಕ್ಕೆ ಮಾರಕವಾಗಿರುವ ಉಗ್ರರನ್ನು ಮಟ್ಟಹಾಕಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಉಗ್ರರನ್ನು ಸದೆ ಬಡಿಯಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪಹಲ್ಗಾವ್ನಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ದೇಶ ಒಗ್ಗಟ್ಟಾಗಿ ವಿರೋಧಿಸುತ್ತದೆ. ಯಾವುದೇ ಪಕ್ಷ, ಸರ್ಕಾರ ಇರಲಿ, ಎಲ್ಲರೂ ಒಟ್ಟಾಗಿ ಉಗ್ರರನ್ನು ಮೆಟ್ಟಿ ನಿಲ್ಲಬೇಕಿದೆ ಎಂದು ಹೇಳಿದರು.
ಭದ್ರತಾ ವೈಫಲ್ಯದ ಬಗ್ಗೆ ನಾನು ಮಾತನಾಡುವುದಿಲ್ಲ. ನಾವೆಲ್ಲರೂ ಭಾರತೀಯರು. ಈ ಸಂದರ್ಭದಲ್ಲಿ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಬೇಕಿದೆ. ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಈಗಾಗಲೇ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಹೇಳಿದ್ದಾರೆ. ಹಾಗಾಗಿ, ಮುಖ್ಯಮಂತ್ರಿ ಆದಿಯಾಗಿ ನಾವೆಲ್ಲರೂ ಕೇಂದ್ರದ ಜೊತೆಗೆ ನಿಲ್ಲುತ್ತೇವೆ. ಉಗ್ರರನ್ನು ಮಟ್ಟ ಹಾಕುವುದೇ ನಮ್ಮೆಲ್ಲರ ಉದ್ದೇಶ ಎಂದರು.