ನವದೆಹಲಿ, ಏ.26(DaijiworldNews/TA): 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕೆಲವು ದಿನಗಳ ನಂತರ, ಶುಕ್ರವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಲಷ್ಕರ್-ಎ-ತೈಬಾ (ಎಲ್ಇಟಿ) ಕಮಾಂಡರ್ ಸೇರಿದಂತೆ ಐದು ಭಯೋತ್ಪಾದಕರ ಮನೆಗಳನ್ನು ನಾಶಪಡಿಸಲಾಗಿದೆ.

ಶೋಪಿಯಾನ್, ಕುಲ್ಗಾಮ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಎಲ್ಇಟಿ ಉಗ್ರರ ಮತ್ತು ದಾಳಿಗೆ ಸಂಬಂಧಿಸಿದ ಶಂಕಿತರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಿದೆ. ಎಲ್ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ.
ಶೋಪಿಯಾನ್ನ ಕಳೆದ ಮೂರ್ನಾಲ್ಕು ವರ್ಷಗಳಿಂದ ಭಯೋತ್ಪಾದನಾ ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ ಮತ್ತು ದೇಶ ವಿರೋಧಿ ಕಾರ್ಯಾಚರಣೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಲ್ವಾಮಾದ ಮುರ್ರಾನ್ ಪ್ರದೇಶದಲ್ಲಿ, ಭಯೋತ್ಪಾದಕ ಅಹ್ಸಾನ್ ಉಲ್ ಹಕ್ನ ಮನೆ ಸ್ಫೋಟಿಸಿ ನೆಲಸಮ ಮಾಡಲಾಗಿದೆ. 2018 ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದು, ಇತ್ತೀಚೆಗೆ ಕಣಿವೆಗೆ ಮತ್ತೆ ಪ್ರವೇಶಿಸಿದ್ದ ಎನ್ನಲಾಗಿದೆ. ಎಲ್ಲ ಭಯೋತ್ಪಾದಕರನ್ನು ವಾಂಟೆಡ್ ಲಿಸ್ಟ್ಗೆ ಸೇರಿಸಲಾಗಿದೆ.