ಬೆಂಗಳೂರು, ಏ.25 (DaijiworldNews/AK):ಪಾಕಿಸ್ತಾನಕ್ಕಿಂತ ಮೊದಲು ದೇಶದ ಒಳಗಿರುವ ಸ್ಲೀಪರ್ ಸೆಲ್ಗಳನ್ನು ಮಟ್ಟ ಹಾಕಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವರಿಗೆ ನೆರವು ಕೊಡುವುದು, ಬೇಲ್ ಕೊಡಿಸುವುದು, ಕಾನೂನು ಸಹಾಯ ಮಾಡುವುದು ನಡೆಯುತ್ತಿದೆ. ಇಂತಹವರನ್ನು ಕೂಡ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಎಲ್ಲಾ ವಲಯ ಆಯುಕ್ತರ ಕಚೇರಿಯ ಮುಂದೆ ಏ. 28ರಿಂದ 3 ದಿನಗಳ ಕಾಲ ಕಾಂಗ್ರೆಸ್ ಸರ್ಕಾರ ಮಾಡಿದ ಬೆಲೆ ಏರಿಕೆಯ ವಿರುದ್ಧ ಹೋರಾಟ ಮಾಡಲಾಗುತ್ತದೆ. ಹಾಲು, ವಿದ್ಯುತ್ ಹಾಗೂ ಆಸ್ತಿ ತೆರಿಗೆ ಹಾಗೂ ಪಾರ್ಕಿಂಗ್ ಶುಲ್ಕದ ಬಗ್ಗೆ ಹೋರಾಟ ಮಾಡಲಾಗುವುದು.
ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ಸ್ಪೀಕರ್ ಜೊತೆ ಚರ್ಚಿಸಲಾಗಿದೆ. ಈ ಅಮಾನತು ಆ ಒಂದು ಅಧಿವೇಶನಕ್ಕೆ ಮಾತ್ರ ಸೀಮಿತವಾಗಬೇಕು. ಅದನ್ನು ಬಿಟ್ಟು ಹೊರಗೆ ಭತ್ಯೆ ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಇದು ಅಸಂವಿಧಾನಿಕವಾದ ಕ್ರಮ ಎಂದರು.