ಶ್ರೀನಗರ, ಏ.23 (DaijiworldNews/AA): ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 26 ಜನರ ಮೃತದೇಹಗಳಿಗೆ ಪುಷ್ಪಗುಚ್ಛ ಅರ್ಪಿಸಿದ್ದಾರೆ. ಈ ಹೇಯ ಕೃತ್ಯ ನಡೆಸಿದ ಅಪರಾಧಿಗಳನ್ನು ಶಿಕ್ಷಿಸುವುದಾಗಿ ಸಂತ್ರಸ್ತರಿಗೆ ಭರವಸೆ ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೇಟಿ ಬಳಿಕ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ ಅವರು, "ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಭಾರವಾದ ಹೃದಯದಿಂದ ಅಂತಿಮ ನಮನ ಸಲ್ಲಿಸಿದೆ. ಭಾರತ ದೇಶವೆಂದೂ ಭಯೋತ್ಪಾದನೆಗೆ ಮಣಿಯುವುದಿಲ್ಲ. ಈ ಭೀಕರ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಬಿಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.
"ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರದಲ್ಲಿ ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದಾರೆ" ಎಂದು ವಕ್ತಾರರು ತಿಳಿಸಿದ್ದಾರೆ.
ಈ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಸೇರಿ ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಪೊಲೀಸರು ಭಾಗವಹಿಸಿದ್ದರು.