ಬೆಂಗಳೂರು, ಏ.23DaijiworldNews/AK):ಧರ್ಮಾಧರಿತವಾಗಿ ಭಯ ಹುಟ್ಟಿಸುವ ಭಯೋತ್ಪಾದಕರ ಈ ದುಷ್ಕಂತ್ಯವನ್ನು ಖಂಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರುವುದಾಗಿ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ. ಸಿ.ಎನ್. ಅಶ್ವತನಾರಾಯಣ್ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಮ್ಮು- ಕಾಶ್ಮೀರದ ಪಹಲ್ಗಾಮ್ನಲ್ಲಿ 28 ಜನರನ್ನು ಭಯೋತ್ಪಾದಕರು ಕೊಂದಿದ್ದಾರೆ. ಈ ಘಟನೆಯನ್ನು ಖಂಡಿಸುವುದಾಗಿ ತಿಳಿಸಿದರು. ದೇಶದ ಏಕತೆ, ಒಗ್ಗಟ್ಟು ಮುರಿಯಲು ಸದಾ ಕಾಲ ಪ್ರಯತ್ನ ನಡೆದಿದೆ ಎಂದು ಆಕ್ಷೇಪಿಸಿದರು.
ಪಾಕಿಸ್ತಾನವು ತನ್ನ ದೇಶ ನಿರ್ವಹಣೆ ಮಾಡಲು ವಿಫಲವಾಗಿದೆ. ಬಡತನ, ಆರ್ಥಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ ಬಹಳಷ್ಟಿದೆ. ನಾವು ಹಾಳಾಗಿ ಹೋಗಿದ್ದು, ಇನ್ನೊಬ್ಬರು ಬದುಕುವುದನ್ನು ನಮಗೆ ಸಹಿಸಲು ಆಗುವುದಿಲ್ಲ ಎಂಬಂತೆ ಭಯೋತ್ಪಾದಕರ ಕೃತ್ಯ ಮಾಡುತ್ತಿದ್ದಾರೆ. ಅಶಾಂತಿ ತರುವ ಪ್ರಯತ್ನ ಪಾಕಿಸ್ತಾನದಿಂದ ನಡೆಯುತ್ತಿದೆ. ಇದಕ್ಕೆ ಸಾಕಷ್ಟು ಬುದ್ಧಿ ಕಲಿಸುವ ಕೆಲಸ ಭಾರತ ಸರಕಾರ ಮತ್ತು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರಿಂದ ನಡೆಯುತ್ತಿದೆ ಎಂದರು.
ಮೋದಿಜೀ ಅವರು ಬಹಳ ಸ್ಪಷ್ಟವಾಗಿ ಪಾಕಿಸ್ತಾನದ ಭಯೋತ್ಪಾದಕರ ತರಬೇತಿ ಶಿಬಿರವನ್ನು ಈಗಾಗಲೇ ನಿರ್ನಾಮ ಮಾಡಿದ್ದಾರೆ. ಭಯೋತ್ಪಾದಕರನ್ನು ಬುಡಸಮೇತ ಕಿತ್ತು ಹಾಕುವ ಕೆಲಸ ಆಗಿಯೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇವರಿಗೆ ಸರಿಯಾದ ಪಾಠ ಕಲಿಸುವ ಕೆಲಸ ಆಗಲಿದೆ ಎಂದರು.
ದೇಶವು ಈ ಸಂದರ್ಭದಲ್ಲಿ ಒಗ್ಗಟ್ಟಾಗಿರಬೇಕು. ನಾವೆಲ್ಲ ಭಾರತೀಯರು ಒಗ್ಗಟ್ಟಿನಿಂದಿದ್ದು ಶಾಂತಿ, ಸಹಿಷ್ಣುತೆಯನ್ನು ಕಾಪಾಡಬೇಕು. ಪಕ್ಷಾತೀತ, ಧರ್ಮಾತೀತವಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇಡೀ ರಾಜ್ಯದಲ್ಲಿ ಇವತ್ತು ಕ್ಯಾಂಡಲ್ ಲೈಟ್ ಹೊತ್ತಿಸಿ ಮೃತರಿಗೆ ಶಾಂತಿ ಕೋರಲಾಗುವುದು. ಇಡೀ ದೇಶದಲ್ಲಿ ಈ ಘಟನೆಯನ್ನು ಖಂಡಿಸೋಣ ಎಂದು ವಿನಂತಿಸಿದರು. ಮಲ್ಲೇಶ್ವರದ ಕಚೇರಿ ಮುಂದೆ, ಸ್ಯಾಂಕಿ ಟ್ಯಾಂಕಿಯಲ್ಲೂ ಇವತ್ತು ಸಂಜೆ ಕ್ಯಾಂಡಲ್ ಲೈಟ್ ಹೊತ್ತಿಸಿ ಮೃತರಿಗೆ ಶಾಂತಿ ಕೋರಲಾಗುವುದು ಎಂದು ತಿಳಿಸಿದರು.