ನವದೆಹಲಿ, ಏ.23DaijiworldNews/TA): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು, ಘಟನೆಯಲ್ಲಿ ಭಾಗಿಯಾದ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ. ಭದ್ರತಾ ಸಂಸ್ಥೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ಈ ಭಯಾನಕ ದಾಳಿಯ ಹಿಂದಿನ ಕ್ರೂರ ಯೋಜನೆಯನ್ನು ಬಯಲು ಮಾಡಲು ಸರ್ವ ಪ್ರಯತ್ನಗಳನ್ನು ಮಾಡುತ್ತಿವೆ.


ಭಯೋತ್ಪಾದಕ ದಾಳಿಯ ಕೆಲವೇ ಗಂಟೆಗಳಲ್ಲಿ, ಶಂಕಿತ ಭಯೋತ್ಪಾದಕನ ಮೊದಲ ಫೋಟೋ ಬಹಿರಂಗಗೊಂಡಿದೆ ಎಂದು ವರದಿಯಾಗಿದೆ. ವೀಡಿಯೊವೊಂದರಲ್ಲಿ ತೆಗೆದ ಸ್ಕ್ರೀನ್ಶಾಟ್ನಲ್ಲಿ, ಭಯೋತ್ಪಾದಕನೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಕುರ್ತಾದಲ್ಲಿ ಎಕೆ ಸರಣಿಯ ಅಸಾಲ್ಟ್ ರೈಫಲ್ನೊಂದಿಗೆ ಕಾಣಿಸಿಕೊಂಡಿದ್ದಾನೆ. ಭದ್ರತಾ ಸಂಸ್ಥೆಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಇವನೂ ಒಬ್ಬ ಎಂಬುವುದಾಗಿ ಹೇಳಿದ್ದಾರೆ. ಶಸ್ತ್ರಾಸ್ತ್ರಗಳನ್ನು ಹಿಡಿದು ಪಠಾಣ್ ಸೂಟ್ ಧರಿಸಿರುವ ವ್ಯಕ್ತಿಯೊಬ್ಬ ವಿಡಿಯೋದಲ್ಲಿ ಸೆರೆಯಾಗಿದ್ದಾನೆ. ಈ ಫೋಟೋವನ್ನು ನಿನ್ನೆ ತಡರಾತ್ರಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಸಿಆರ್ಪಿಎಫ್ ಮತ್ತು ಸೇನೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಧಾವಿಸಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬಂದಿದ್ದಾರೆ. ಇದಕ್ಕೂ ಮೊದಲು, ಪ್ರಧಾನಿ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು ಮತ್ತು ಸಂತ್ರಸ್ತರಿಗೆ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು. "ಈ ಹೇಯ ಕೃತ್ಯದ ಹಿಂದಿರುವವರನ್ನು ನ್ಯಾಯಕ್ಕೆ ಒಳಪಡಿಸಲಾಗುವುದು... ಅವರನ್ನು ಬಿಡಲಾಗುವುದಿಲ್ಲ ಅವರ ದುಷ್ಟ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ" ಎಂದು ಅವರು ಹೇಳಿದರು.