ಶ್ರೀನಗರ, ಏ.22 (DaijiworldNews/AK): ಉಗ್ರರ ದಾಳಿಗೆ ಮತ್ತೊಬ್ಬ ಕನ್ನಡಿಗ ಸಾವನ್ನಪ್ಪಿದ್ದಾರೆ. ಮೃತರನ್ನು ಹಾವೇರಿಯ ರಾಣೆಬೆನ್ನೂರು ಮೂಲದ ಭರತ್ ಭೂಷಣ್ ಎಂದು ಗುರುತಿಸಲಾಗಿದೆ.

ಭರತ್ ಅವರು ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಅವರ ಅಳಿಯನ ಸ್ನೇಹಿತ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ದಾಳಿಯಲ್ಲಿ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ಎಂಬವರು ಸಾವಿಗೀಡಾಗಿದ್ದರು.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧ್ಯಾಹ್ನದ ವೇಳೇ ಪಹಲ್ಗಾಮ್ನ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಕುದುರೆ ಮೇಲೆ ಕುಳಿತು ಪ್ರವಾಸಿಗರು ಸಮಯ ಕಳೆಯುತ್ತಿದ್ದ ವೇಳೆ, ಪ್ರವಾಸಿಗರನ್ನು ಮಾತನಾಡಿಸುವ ನೆಪದಲ್ಲಿ ಬಂದು ಉಗ್ರರು ಗುಂಡು ಹಾರಿಸಿದ್ದರು.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಹ ದಾಳಿಯನ್ನು ಖಂಡಿಸಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸುವುದು ಅತ್ಯಂತ ಹೇಯ ಕೃತ್ಯ ಎಂದು ಕಿಡಿಕಾರಿದ್ದಾರೆ. ಈ ನಡುವೆ ಭಯೋತ್ಪಾದಕರನ್ನು ಹಿಡಿಯಲು ಭದ್ರತಾ ಪಡೆಗಳು ಶೋಧ ಕಾರ್ಯಾ ಪ್ರಾರಂಭಿಸಿವೆ.