ಶ್ರೀನಗರ, ಏ.22 (DaijiworldNews/AK): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಸೌದಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಗೃಹ ಸಚಿವ ಅಮಿತ್ ಶಾ ಅವರಿಗೆ ಕರೆ ಮಾಡಿ ಮಾಹಿತಿ ಪಡೆದರು. ಉಗ್ರರ ದಾಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಸ್ಥಳಕ್ಕೆ ಭೇಟಿ ನೀಡುವಂತೆ ಅವರು ಅಮಿತ್ ಶಾ ಅವರಿಗೆ ಸೂಚಿಸಿದರು.

ಪ್ರಧಾನಿ ಸೂಚನೆಯಂತೆ ಅಮಿತ್ ಶಾ ಅವರು ಘಟನಾ ಸ್ಥಳಕ್ಕೆ ಹೊರಟಿದ್ದಾರೆ. ಅಮಿತ್ ಶಾ ಅವರು ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಈ ಬಗ್ಗೆ ಸಭೆ ಕರೆದಿದ್ದರು. ಸಭೆಯಲ್ಲಿ ಗುಪ್ತಚರ ಬ್ಯೂರೋ ಮುಖ್ಯಸ್ಥ ತಪನ್ ದೇಕಾ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲದೇ ದಾಳಿ ನಡೆದ ಸ್ಥಳಕ್ಕೆ ಭದ್ರತಾ ಪಡೆಗಳು ಮತ್ತು ವೈದ್ಯಕೀಯ ತಂಡಗಳು ದಾಳಿ ನಡೆದ ಪ್ರದೇಶಕ್ಕೆ ತೆರಳಿವೆ.
ಭಯೋತ್ಪಾದಕ ದಾಳಿಯಲ್ಲಿ ಶಿವಮೊಗ್ಗದ ಪ್ರವಾಸಿಗರೊಬ್ಬರು ಸಾವಿಗೀಡಾಗಿದ್ದಾರೆ. ದಾಳಿಯಲ್ಲಿ ಇತರ 12 ಜನ ಗಾಯಗೊಂಡಿದ್ದಾರೆ.