ನವದೆಹಲಿ,ಏ.22 (DaijiworldNews/AK): ಕೇಂದ್ರ ಲೋಕಸೇವಾ ಆಯೋಗ 2024ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಒಟ್ಟು 1,009 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, 2018ರಿಂದ ಯುಪಿಎಸ್ಸಿ ತಯಾರಿ ನಡೆಸುತ್ತಿದ್ದ ಪ್ರಯಾಗ್ರಾಜ್ನ ಶಕ್ತಿ ದುಬೆ ಪ್ರಥಮ ರ್ಯಾಂಕ್ನೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಹರ್ಷಿತಾ ಗೋಯಲ್ 2ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 1,129 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಪೈಕಿ ಭಾರತೀಯ ಆಡಳಿತ ಸೇವೆ (IAS) ನ 180 ಹುದ್ದೆಗಳು, ಭಾರತೀಯ ವಿದೇಶಾಂಗ ಸೇವೆ (IFS) ನ 55 ಹುದ್ದೆಗಳು ಮತ್ತು ಭಾರತೀಯ ಪೊಲೀಸ್ ಸೇವೆ (IPS) ನ 147 ಹುದ್ದೆಗಳು ಸೇರಿವೆ.
ಫಲಿತಾಂಶದಲ್ಲಿ ಉತ್ತರ ಪ್ರದೇಶ ಪ್ರಯಾಗ್ರಾಜ್ ಮೂಲದ ಶಕ್ತಿ ದುಬೆ, ಯುಪಿಎಸ್ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಶಕ್ತಿ ದುಬೆ, ಬನಾರಸ್ ವಿವಿಯಲ್ಲಿ ಜೀವ ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೋಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೋಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಮ್ ಅಗರ್ವಾಲ್, ಮಾಯಾಂಕ್ ತ್ರಿಪಾಠಿ ಕ್ರಮವಾಗಿ ಅಗ್ರ 10 ರ್ಯಾಂಕ್ಗಳಲ್ಲಿದ್ದಾರೆ.
ಯುಪಿಎಸ್ಸಿಯಲ್ಲಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳ ಸಾಧನೆ
ಕರ್ನಾಟಕ ಹಲವು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ತಮ್ಮೂರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ನಿವಾಸಿ ಸಚಿನ್ ಗುತ್ತೂರು ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಪಡೆದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಸಚಿನ್ ಬಸವರಾಜ ಗುತ್ತೂರ ಅವರು ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ರೈತರ ಪುತ್ರ ಪಾಂಡುರಂಗ ಸದಾಶಿವ ಕಂಬಳಿ 529ನೇ ರ್ಯಾಂಕ್ ಪಡೆದಿದ್ದಾರೆ. ಪಾಡುರಂಗ ಅವರು ಕಳೆದ ಒಂದು ವರ್ಷದಿಂದ ಐಎಫ್ಎಸ್ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಮಾಡುತ್ತಲೇ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಪಾಡುರಂಗ ಅವರು ಐದನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.
ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ರೈತ ಆನಂದ್ ಹಾಗೂ ಸುಶೀಲಮ್ಮ ದಂಪತಿ ಪುತ್ರ ಎ.ಮಧು ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 544ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಬಿಎಸ್ಸಿ ಅಗ್ರಿಕಲ್ಚರ್ನಲ್ಲಿ ಮಧು ಅವರು ಪದವಿ ಪಡೆದಿದ್ದಾರೆ.