ಬೆಂಗಳೂರು, ಏ.21 (DaijiworldNews/AA): ಬಿಜೆಪಿ ಶಾಸಕರ ಅಮಾನತು ಆದೇಶ ಕುರಿತು ಇಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಶಾಸಕರ ಅಮಾನತು ಆದೇಶವನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದೇವೆ. ಈ ಬಗ್ಗೆ ಪರಿಶೀಲಿಸುವುದಾಗಿ ಸ್ಪೀಕರ್ ತಿಳಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿಂದು ಯು.ಟಿ.ಖಾದರ್ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಕಮಿಟಿ ಸಭೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶಾಸಕರ ಅಮಾನತು ಮಾಡಿರುವ ಕ್ರಮ ಸರಿಯಲ್ಲ. ಹಿಂದೆ ಈ ರೀತಿಯ ಅನೇಕ ಘಟನೆಗಳು ಸದನದಲ್ಲಿ ನಡೆದಿವೆ ಎಂದು ಸ್ಪೀಕರ್ ಅವರಿಗೆ ಮನವರಿಕೆ ಮಾಡಲಾಗಿದೆ ಎಂದರು.
ಪ್ರತಿಪಕ್ಷವಾಗಿ ಬಿಜೆಪಿ ಪಕ್ಷ ಸಚಿವ ಕೆ.ಎನ್.ರಾಜಣ್ಣ ಅವರ ಹನಿಟ್ರ್ಯಾಪ್ ಬಗ್ಗೆ ಮಾತನಾಡಬೇಕಿತ್ತು, ಮಾತನಾಡಿದ್ದೇವೆ. ಅದು ಬಿಟ್ಟರೆ ಸ್ಪೀಕರ್ ಕುರ್ಚಿ ಮೇಲೆ ನಮಗೆ ಅಗೌರವ ಇಲ್ಲ. ಹಾಗಾಗಿ, ಶಾಸಕರ ಅಮಾನತನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದೇವೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಘಟನೆ ವಿಧಾನಸಭೆ ಒಳಗೆ ಆಗಿದೆ. ಹಾಗಾಗಿ ಕಾನೂನು ಸಚಿವರು ಹಾಗೂ ಸರ್ಕಾರದ ಜೊತೆ ಚರ್ಚೆ ಮಾಡಿ ತಿಳಿಸುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.