ಬೆಂಗಳೂರು, ಏ.20 (DaijiworldNews/AA): ರಾಜ್ಯದ ಖಜಾನೆಯಲ್ಲಿ ಭದ್ರವಾಗಿರಿಸಿದ್ದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿ ವರದಿಯನ್ನು ತೆರೆದು ಅದರಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ರಲ್ಲಿ ಸೀಲ್ ಮಾಡಲಾಗಿದ್ದ ಲಕೋಟೆಯನ್ನು ತೆರೆದಿರುವ ವಿಷಯವನ್ನು ಅಂದಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಗಡೆ ಅವರು ಗಮನಿಸಿದ್ದು, ಈ ಸಂಬಂಧ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಕಾಂತರಾಜು ಸಮಿತಿಯು ಸಿದ್ಧಪಡಿಸಿದ್ದ ವರದಿಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಲ್ಲಿ ಇರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಗಣತಿಯ ಹೆಸರಿನಲ್ಲಿ ಸರ್ಕಾರ 169 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದೆ. ಈ ಸಂಬಂಧ ಸರ್ಕಾರ, ಸಮೀಕ್ಷೆ ನಡೆಸಿದವರ ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸಿ, ಸಮೀಕ್ಷೆಗೆ ಮಾಡಲಾದ ಖರ್ಚು, ವೆಚ್ಚಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.