ನವದೆಹಲಿ, ಏ.20 (DaijiworldNews/AA): ಪಾಕಿಸ್ತಾನವು ಇಸ್ಲಾಮಿಕ್ ಸಹಕಾರ ಸಂಘಟನೆ - ಓಐಸಿ ವೇದಿಕೆಯನ್ನು ಭಾರತ ವಿರೋಧಿ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಆರೋಪಿಸಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಪಾಕಿಸ್ತಾನದ ವರ್ತನೆಯನ್ನು ಓಐಸಿಯ ವೇದಿಕೆಯಲ್ಲಿ ಮಿತ್ರ ರಾಷ್ಟ್ರಗಳೊಂದಿಗೆ ಚರ್ಚಿಸಲು ಭಾರತ ಉದ್ದೇಶಿಸಿದೆ. ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನದ ನಡವಳಿಕೆಯ ಎಲ್ಲ ವಿವರಗಳನ್ನು ಓಐಸಿ ಮಿತ್ರ ರಾಷ್ಟ್ರಗಳೊಂದಿಗೆ ಭಾರತ, ಹಂಚಿಕೊಳ್ಳಲು ಸಹ ಚಿಂತನೆ ನಡೆಸಿದೆ ಎಂದರು.
ರಷ್ಯಾ- ಉಕ್ರೇನ್ ಸಂಘರ್ಷದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಈ ಸಂಬಂಧ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸುವಂತೆ ಮಾಡಲು ಭಾರತ ಮಧ್ಯಸ್ಥಿಕೆ ವಹಿಸುವ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈದಿಕ್ಕಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಉಭಯ ದೇಶಗಳ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ಸಹ ನಡೆಸಿದ್ದಾರೆ. ಶಾಂತಿ- ಸೌಹಾರ್ದಯುತವಾದ ವಾತಾವರಣದಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸುವುದು ಭಾರತದ ಉದ್ದೇಶವಾಗಿದೆ. ಈ ಉದ್ದೇಶಕ್ಕೆ ಮಿತ್ರ ರಾಷ್ಟ್ರವಾದ ಸೌದಿ ಅರೇಬಿಯಾ ಸಹ ಕೈಜೋಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.