ಚಾಮರಾಜನಗರ,ಏ.18(DaijiworldNews/AK): ಮಲೆಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕೊನೆಗೂ ಮುಹೂರ್ತ ಕೂಡಿಬಂದಿದೆ. ಏಪ್ರಿಲ್ 24 ರಂದು ಮಾದಪ್ಪನ ಸನ್ನಿಧಿಯಲ್ಲಿ ನಡೆಯಲಿರುವ ಐತಿಹಾಸಿಕ ಸಚಿವ ಸಂಪುಟ ಸಭೆಗೆ ಸಿದ್ದತೆ ಭರದಿಂದ ನಡೆದಿದೆ.

2025 ನೇ ಸಾಲಿನ ಒಂಬತ್ತನೇ ಸಚಿವ ಸಂಪುಟ ಸಭೆಯನ್ನು ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ವಡ್ಡುವಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೂರು ಬಾರಿ ಮುಂದೂಡಲ್ಪಟ್ಟಿದ್ದ ಕ್ಯಾಬಿನೆಟ್ ಮೀಟಿಂಗ್ ಏಪ್ರಿಲ್ 24 ರಂದು ಮದ್ಯಾಹ್ನ 12 ಗಂಟೆಗೆ ದೀಪದಗಿರಿ ವಡ್ಡುವಿನಲ್ಲಿರುವ ಮಹದೇಶ್ವರನ 108 ಅಡಿ ಪ್ರತಿಮೆ ಬಳಿ ನಡೆಯಲಿದೆ.
ಈ ಸಂಪುಟ ಸಭೆಯಲ್ಲಿ ಮೈಸೂರು ವಿಭಾಗದ ಚಾಮರಾಜನಗರ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ಉಡುಪಿ, ಮಂಗಳೂರು ಮತ್ತು ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಚರ್ಚೆಗೆ ಬರಲಿವೆ.
ಕ್ಯಾಬಿನೆಟ್ ಮೀಟಿಂಗ್ ಯಶಸ್ಸಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟದಲ್ಲಿ ಭರ್ಜರಿ ತಯಾರಿ ನಡೆಸಲಾಗಿದೆ.