ಬೀದರ್, ಏ.18(DaijiworldNews/AK): ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 38,500 ಕೋಟಿ ಹಣವನ್ನು ಕಾಂಗ್ರೆಸ್ ಸರಕಾರವು ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಇಂದು ಇಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಸರಕಾರ ಜವಾಬ್ದಾರಿ ಮರೆತಿವೆ. ಅವರನ್ನು ಎಚ್ಚರಿಸುವ ಕೆಲಸವನ್ನು ವಿಪಕ್ಷವಾಗಿ ನಾವು ಮಾಡುತ್ತಿದ್ದೇವೆ. ಅದಕ್ಕಾಗಿ ಈ ಜನಾಕ್ರೋಶದ ಯಾತ್ರೆ ಎಂದು ತಿಳಿಸಿದರು.ರಾಜ್ಯದ ಸಿಎಂ ಆಗಿ ರೈತರ ಕಣ್ಣೀರು ಒರೆಸಿದ್ದೀರಾ? ಬಡವರ ಕಣ್ಣೀರು ಒರೆಸಿದ್ದೀರಾ? ಪರಿಶಿಷ್ಟ ಜಾತಿ, ಪಂಗಡದವರ ನೋವಿಗೆ ಸ್ಪಂದಿಸಿದ್ದೀರಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ರಾಜ್ಯವು ಹಿಂದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಅಭಿವೃದ್ಧಿ ವಿಚಾರದಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿತ್ತು ಎಂದು ವಿವರಿಸಿದರು.
ರಾಜ್ಯವು ಈಗ ಭ್ರಷ್ಟಾಚಾರದಲ್ಲಿ ನಂಬರ್ ವನ್ ಸ್ಥಾನ ಪಡೆದಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಈ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ತಿಳಿಸಿದರು.ಬಡವರ, ರೈತರ, ಪರಿಶಿಷ್ಟ ಜಾತಿ, ಪಂಗಡದ ಪರವಾಗಿದ್ದ ಕಾಳಜಿ ಎಲ್ಲಿ ಹೋಗಿದೆ ಸಿದ್ದರಾಮಯ್ಯನವರೇ ಎಂದು ಕೇಳಿದರು. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ಸರಕಾರದ ಅಲ್ಪಸಂಖ್ಯಾತರ ಪರ ನೀತಿಯಿಂದ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ; ಪ್ರಧಾನಿ ನರೇಂದ್ರ ಮೋದಿಜೀ ಅವರು ತ್ರಿವಳಿ ತಲಾಖ್ ರದ್ದು ಮಾಡಿ ಮುಸಲ್ಮಾನ ಹೆಣ್ಮಕ್ಕಳಿಗೆ ನ್ಯಾಯ ದೊರಕಿಸಿದ್ದಾರೆ. ಆದರೆ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವವರನ್ನು ನಾವು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.ಬಿಜೆಪಿ ದೇಶಭಕ್ತರ ಪಕ್ಷ. ನಾವು ಕಾಂಗ್ರೆಸ್ಸಿನಿಂದ ಪಾಠ ಕಲಿಯಬೇಕಿಲ್ಲ ಎಂದು ತಿಳಿಸಿದರು.