ಬೀದರ್, ಏ.18(DaijiworldNews/AK): ಬೆಲೆ ಏರಿಕೆಯೇ ಕಾಂಗ್ರೆಸ್ಸಿನ ರಾಜ್ಯ ಸರಕಾರದ ಅಭೂತಪೂರ್ವ ಕೊಡುಗೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಟೀಕಿಸಿದ್ದಾರೆ.

ಇಂದು ಇಲ್ಲಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ ಎದ್ದು ಕುಡಿಯುವ ಕಾಫಿ, ಚಹಾಕ್ಕೆ ಬಳಸುವ ಹಾಲು ಸೇರಿ, ಆಲ್ಕೋಹಾಲ್ ವರೆಗೆ 50 ದಿನಬಳಕೆ ವಸ್ತುಗಳ ಮೇಲೆ ಬೆಲೆ ಏರಿಸಿದ ರಾಜ್ಯದ್ರೋಹಿ, ಜನದ್ರೋಹಿ ಸರಕಾರ ಸಿದ್ದರಾಮಯ್ಯರದು ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಬೀದರ್ನ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಜನಿವಾರ, ಶಿವದಾರ ಹಾಕಬಾರದು ಎಂಬ ಜಾತ್ಯತೀತ ಸರಕಾರವಿದು. ಇದು ಸಿದ್ದರಾಮಯ್ಯ ಸರಕಾರದ ಹೊಸ ಸೆಕ್ಯುಲರ್ ನೀತಿಯೇ ಎಂದು ಕೇಳಿದರು. ಸರಕಾರದ ಈ ನೀತಿಯಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಹಳೆ ಕಲ್ಲು ಹೊಸ ಬಿಲ್ಲು ಈ ಸರಕಾರದ ನೀತಿ ಎಂದು ಟೀಕಿಸಿದರು.ಕರ್ನಾಟಕದಲ್ಲಿ ಬೆಲೆ ಏರಿಕೆಯ ವಾರ್ ನಡೆದಿದೆ. ಜೀವನ ದುಸ್ತರವಾಗಿದೆ ಎಂದು ಆಕ್ಷೇಪಿಸಿದರು. ನಿಮ್ಮದ್ಯಾವ ಸಿಎಂ? ಲೂಟ್ ಸಿಎಂ? ಎಂದು ಕೇಳಿದರು. ಕರ್ನಾಟಕವು ರೇಪ್ ರಾಜ್ಯವಾಗಿದೆ. ಸಿದ್ದರಾಮಯ್ಯನವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.