ಹುಬ್ಬಳ್ಳಿ, ಏ.13 (DaijiworldNews/AA): 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕತ್ತು ಹಿಸುಕಿ ಕೊಲೆ ಮಾಡಿದ್ದ ಬಿಹಾರ ಮೂಲದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿ ಅರೆಸ್ಟ್ ಮಾಡಿದ್ದಾರೆ.

ಬಿಹಾರ ಮೂಲದ ಸೈಕೋಪಾತ್ ಬಾಲಕಿಯನ್ನ ಶೆಡ್ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಬಾಲಕಿಯ ಚೀರಾಟ ಕೇಳಿ ಅಲ್ಲೇ ಇದ್ದ ಸ್ಥಳೀಯರು ಶೆಡ್ನತ್ತ ಬಂದಿದ್ದರು. ಜನ ಬರುತ್ತಿರುವುದನ್ನು ಗಮನಿಸಿದ ಸೈಕೋಪಾತ್ ಭಯದಿಂದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ, ಪರಾರಿಯಾಗಿದ್ದ.
ಇದೀಗ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ. ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಬಾಲಕಿ ಕೊಲೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಬಾಲಕಿ ಪೋಷಕರು ಕೊಪ್ಪಳ ಮೂಲದವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ತಂದೆ ಪೇಯಿಂಟಿಂಗ್ ಕೆಲಸ, ತಾಯಿ ಮನೆಗೆಲಸ ಮಾಡಿಕೊಂಡಿದ್ದರು. ಬಾಲಕಿಯ ಮೇಲೆ ದೌಜನ್ಯದ ಬಗ್ಗೆ ಪರಿಶೀಲನೆ ನಡೆದಿದೆ. ಆರೋಪಿ ಬಾಲಕಿ ಜೊತೆ ಯಾವ ವರ್ತನೆ ಮಾಡಿದ್ದಾನೆಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.