ಬೆಂಗಳೂರು, ಏ.07 (DaijiworldNews/AA): ರಾಜ್ಯದಲ್ಲಿರುವ 16%, 18% ಅಲ್ಪಸಂಖ್ಯಾತರು ಮುಖ್ಯ ವಾಹಿನಿಗೆ ಬರಲು ಗುತ್ತಿಗೆಯಲ್ಲಿ 4% ಮೀಸಲಾತಿ ಕಾನೂನು ಜಾರಿಗೆ ತಂದಿದ್ದೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.

ಮುಸ್ಲಿಮರಿಗೆ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿರುವ ವಿಚಾರಕ್ಕೆ ಬಿಜೆಪಿ ವಿರೋಧ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಜ್ಞಾಪೂರ್ವಕವಾಗಿ ನಮ್ಮ ಸರ್ಕಾರ ಮತ್ತು ಪಕ್ಷ ಇದನ್ನು ಮಾಡಿದೆ. ಯಾರು ಸಮುದಾಯದಲ್ಲಿ ಹಿಂದೆ ಉಳಿದಿದ್ದಾರೆ. ಅವರನ್ನು ಮೇಲೆ ತರುವಂತಹ, ಸಮಾಜದ ಮುಖ್ಯ ವಾಹಿನಿಗೆ ಬರುವ ಯೋಜನೆ ಹಾಗೂ ಕಾನೂನುಗಳನ್ನು ಸರ್ಕಾರ ಆಗಾಗ ಜಾರಿ ಮಾಡಬೇಕು. ಮೀಸಲಾತಿ ಯಾಕೆ ಬೇಕು ಎನ್ನುವುದು ದೊಡ್ಡ ಪ್ರಶ್ನೆ. ಎಸ್ಸಿ-ಎಸ್ಟಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವಾಗಲು ಇದೇ ಪ್ರಶ್ನೆ ಬರುತ್ತದೆ. ಯಾರು ಹಿಂದೆ ಉಳಿದಿದ್ದಾರೆ, ಸಾವಿರಾರು ವರ್ಷಗಳಿಂದ ಅವಕಾಶ ಸಿಕಿಲ್ಲ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ರಾಜ್ಯದಲ್ಲಿ ಶೇ.16-18ರಷ್ಟು ಇರುವ ಅಲ್ಪಸಂಖ್ಯಾತರು ಹಿಂದೆ ಉಳಿಯಬೇಕಾ? ಕ್ರಿಶ್ಚಿಯನ್, ಜೈನ್, ಮುಸ್ಲಿಮರು ಎಲ್ಲರು ನಮ್ಮ ಜೊತೆ ಮುಖ್ಯ ವಾಹಿನಿಗೆ ಬರಬೇಕು. ಇಷ್ಟೇ ನಮ್ಮ ಉದ್ದೇಶ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಯುಪಿಯಲ್ಲಿ ಜಾರಿ ಮಾಡಲು ರಾಜ್ಯದಲ್ಲಿ ತಂಡದಿಂದ ಅಧ್ಯಯನ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಯಶಸ್ವಿಯಾಗಿರುವುದಕ್ಕೆ ಬೇರೆ ರಾಜ್ಯದವರು ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಫೇಲ್ ಆಗಿದ್ದರೆ ಯಾಕೆ ಬೇರೆ ರಾಜ್ಯದವರು ಅಧ್ಯಯನ ಮಾಡಲು ಬರುತ್ತಿದ್ದರು? ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳು ನಮ್ಮ ಕಾರ್ಯಕ್ರಮ ಅನುಕರಣೆ ಮಾಡುತ್ತಿದ್ದಾರೆ. ಇದರ ಅರ್ಥ ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ ಎಂದರು.