ಬೆಂಗಳೂರು, ಏ.07 (DaijiworldNews/AA): 'ವಿಜಯೇಂದ್ರ ತಮ್ಮ ಕುರ್ಚಿ(ಅಧ್ಯಕ್ಷ ಸ್ಥಾನ) ಉಳಿಸಿಕೊಳ್ಳಲು ಈ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಖಂಡಿತ ಈ ಯಾತ್ರೆಗೆ ಇಲ್ಲ' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ಬೆಲೆ ಏರಿಕೆ ವಿಪರೀತವಾಗಿದೆ ಎಂದು ಆರೋಪಿಸಿ ಬಿಜೆಪಿ 16 ದಿನಗಳ ಜನಾಕ್ರೋಶ ಯಾತ್ರೆ ಆಯೋಜಿಸಿದ್ದು, ಈ ಯಾತ್ರೆ ಇಂದು ಮೈಸೂರಿನಲ್ಲಿ ಪ್ರಾರಂಭವಾಯಿತು. ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಜನಾಕ್ರೋಶ ಯಾತ್ರೆ ಕೈಗೊಂಡಿರುವ ರಾಜ್ಯ ಬಿಜೆಪಿ ನಾಯಕರಿಗೆ ನಾನು ಶುಭ ಕೋರುತ್ತೇನೆ. ಒಂದು ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ವೈಫಲ್ಯ ಮತ್ತು ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ಧ ದನಿ ಎತ್ತಲಾಗದ ಮನೆಮುರುಕುತನದ ಬಗ್ಗೆ ಆಕ್ರೋಶಗೊಂಡಿರುವ ರಾಜ್ಯದ ಜನರ ಮನಸ್ಸು ಅರಿಯಲು ಈ ಯಾತ್ರೆ ನೆರವಾಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ ಎಂದಿದ್ದಾರೆ.
ಇಷ್ಟೊಂದು ಅಸಮರ್ಥ, ನಿರ್ಲಜ್ಜ ಮತ್ತು ಜನವಿರೋಧಿ ವಿರೋಧ ಪಕ್ಷವನ್ನು ರಾಜ್ಯ ಎಂದೂ ಕಂಡಿಲ್ಲ. ಸ್ವಪಕ್ಷೀಯರೇ ಆರೋಪಿಸುವಂತೆ "ಪೇಮೆಂಟ್ ಸೀಟ್" ನಲ್ಲಿ ಕೂತಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ? ನಮ್ಮನ್ನು ಪ್ರಶ್ನಿಸುವ ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಶಾಸಕ ಮಿತ್ರರು ಕಳೆದೆ ಎರಡು ವರ್ಷಗಳಿಂದ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ದಮ್ಮು ತಾಕತ್ ತೋರಿಸಲಿ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ವಿಜಯೇಂದ್ರ ವಿರುದ್ಧ ಸ್ವಪಕ್ಷೀಯರು ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳು ಅವರ ಪಕ್ಷದ ಹೈಕಮಾಂಡಿಗೂ ಮನವರಿಕೆಯಾದಂತಿದೆ. ಪಕ್ಷದೊಳಗಿದ್ದು ಮಾಡುವ ಆರೋಪಗಳಿಂದ ಆಗುವ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಯತ್ನಾಳ್ ಅವರನ್ನು ಪಕ್ಷದಿಂದ ಹೊರಗೆ ಹಾಕಿ, ಅವರಿಂದ ಈಗ ಇನ್ನಷ್ಟು ಆರೋಪಗಳನ್ನು ಮಾಡಿಸುತ್ತಿದೆ. ಅಂತಿಮವಾಗಿ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದೇ ಬಿಜೆಪಿ ಹೈಕಮಾಂಡ್ ಉದ್ದೇಶವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಇದಕ್ಕಾಗಿ ವಿಜಯೇಂದ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ಜನಾಕ್ರೋಶ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆಯೇ ಹೊರತು ಬೇರೆ ಯಾವ ಸಾರ್ವಜನಿಕ ಹಿತಾಸಕ್ತಿಯ ಸದುದ್ದೇಶ ಖಂಡಿತ ಈ ಯಾತ್ರೆಗೆ ಇಲ್ಲ. ವಿಜಯೇಂದ್ರ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರದ್ದು ಮಾತ್ರವಲ್ಲ ರಾಜ್ಯದ ಜನತೆಯ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಬಜೆಟ್ನ 51,000 ಕೋಟಿ ರೂಪಾಯಿ ಹಣ ನೇರವಾಗಿ ಫಲಾನುಭವಿಗಳನ್ನು ತಲುಪುತ್ತಿದ್ದು, ಅವರೆಲ್ಲರೂ ಸಂತುಷ್ಠರಾಗಿದ್ದಾರೆ. ಈಗ ಅವರು ಬೀದಿಗೆ ಬಂದು ನಮ್ಮ ಪರ ಘೋಷಣೆ ಹಾಕದೆ ಇರಬಹುದು, ಆದರೆ ಅವರೆಲ್ಲರ ಆಶೀರ್ವಾದ ನಮ್ಮ ಸರ್ಕಾರದ ಪರವಾಗಿದೆ. ಮೊದಲ ದಿನದಿಂದಲೂ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಬಂದಿರುವ ಭಾರತೀಯ ಜನತಾ ಪಕ್ಷದ ಬಡವರು ಮತ್ತು ಮಹಿಳಾ ವಿರೋಧಿ ಧೋರಣೆಯನ್ನು ಅರ್ಥಮಾಡಿಕೊಳ್ಳುವಷ್ಟು ಜನ ಪ್ರಜ್ಞಾವಂತರಾಗಿದ್ದಾರೆ ಎಂದು ಹೇಳಿದ್ದಾರೆ.