ಬೆಂಗಳೂರು, ಏ.07 (DaijiworldNews/AA): ನಮ್ಮ ಸರ್ಕಾರದ ವಿರುದ್ಧ ಜನರ ಆಕ್ರೋಶ ಇಲ್ಲ. ಬಿಜೆಪಿ ಪಕ್ಷದವರು ಕಾಣೆ ಆಗುತ್ತೇವೆ ಅನ್ನೋ ಭಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ನಮ್ಮ ಸರ್ಕಾರದ ಯಶಸ್ಸು ತಡೆಯಲು ಆಗುತ್ತಿಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಇಂದಿನಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಪ್ರಾರಂಭದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, 2 ವರ್ಷಗಳಿಂದ ಒಳ್ಳೆ ಆಡಳಿತ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನ ನಾವು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ನಮ್ಮ ಆಡಳಿತ, ಗ್ಯಾರಂಟಿ ಅನುಷ್ಠಾನ ಜನರಿಗೆ ಸಮಾಧಾನ ತಂದಿದೆ ಎಂದು ಹೇಳಿದರು.
ಸಿಎಂ ಅವರು ಬ್ಯಾಲೆನ್ಸ್ ಬಜೆಟ್ ಕೊಟ್ಟಿದ್ದಾರೆ. ಇದಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ. ಇದನ್ನೆಲ್ಲಾ ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ತಾವು ಕಳೆದು ಹೋಗುತ್ತೇವೆ ಎಂದು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ಯಾವ ಜನರೂ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಬಿಜೆಪಿ ಪಕ್ಷದವರೇ ಆಕ್ರೋಶ ಮಾಡುತ್ತಿದ್ದಾರೆ ಅಷ್ಟೆ. ಆಕ್ರೋಶ ಅಂದರೆ ಜನ ಬೀದಿ ಬೀದಿಯಲ್ಲಿ ಮಾಡಬೇಕು. ನಮ್ಮ ಸರ್ಕಾರದ ವಿರುದ್ಧ ಈ ರೀತಿ ಆಗಿಲ್ಲ. ಬಿಜೆಪಿ ಅವರು ಮಾತ್ರ ಆಕ್ರೋಶ ಮಾಡುತ್ತಿದ್ದಾರೆ. ಅಷ್ಟೇ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.