ಬೆಂಗಳೂರು, ಏ.04 (DaijiworldNews/AA): ಎಫ್ಐಆರ್ ದಾಖಲಿಸಿದ್ದಕ್ಕೆ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ನಾಗವಾರದ ಕಚೇರಿಯಲ್ಲಿ ಸಂಭವಿಸಿದೆ.

ವಿನಯ್ ಸೋಮಯ್ಯ(35) ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ.
ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್ನೋಟ್ ಪೋಸ್ಟ್ ಮಾಡಿದ್ದ ವಿನಯ್ ಅವರು, ನನ್ನ ಆತ್ಮಹತ್ಯೆಗೆ ವಿರಾಜಪೇಟೆ ಶಾಸಕ ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ವಿನಯ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ್ದಾರೆ. ನನ್ನ ಮೇಲೆ ಎಫ್ಐಆರ್ ದಾಖಲಿಸಿ ಕಿಡಿಗೇಡಿ ಎಂದು ಕೊಡಗು ಜಿಲ್ಲೆಯಲ್ಲಿ ನನ್ನ ಬಗ್ಗೆ ತೆನ್ನೀರಾ ಅಪಪ್ರಚಾರ ಮಾಡಿದ್ದಾನೆ. ತೆನ್ನೀರಾ ಈ ಹಿಂದೆಯೂ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದಾನೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಿಲಿಸಿದರು. ಜಾಮೀನು ಸಿಕ್ಕಿದ್ದರು ನನ್ನ ಸ್ನೇಹಿತನ ಮನೆಗೆ ಹೋಗಿ ಪೊಲೀಸರು ವಿಚಾರಿಸಿದ್ದಾರೆ. ವಿರಾಜಪೇಟೆ ಶಾಸಕ ಪೊನ್ನಣ್ಣ ಆದೇಶದಂತೆ ಇದೆಲ್ಲಾ ಮಾಡಿದ್ದಾರೆ. ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್ಐಆರ್ ಮಾಡಿದ್ದಾರೆ. ನಮ್ಮ ಮೇಲೆ ರೌಡಿಶೀಟ್ ಓಪನ್ ಮಾಡುವ ಹುನ್ನಾರ ನಡೆದಿದೆ. ಇವರಿಗೆ ಸರಿಯಾದ ಶಿಕ್ಷೆಯಾದರೆ ನನ್ನ ಸಾವಿಗೆ ನ್ಯಾಯ ಸಿಗುತ್ತೆ ಎಂದು ವಿನಯ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಮೃತ ವಿನಯ್ ವಾಟ್ಸ್ಆ್ಯಪ್ ಗ್ರೂಪ್ ಒಂದರ ಅಡ್ಮಿನ್ ಆಗಿದ್ದರು. ಆ ಗ್ರೂಪ್ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಬ್ಬರ ಬಗ್ಗೆ ಅಪಹಾಸ್ಯ ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಹಾಗಾಗಿ ಕಾಂಗ್ರೆಸ್ ಮುಖಂಡ ಓರ್ವ ನೀಡಿದ ದೂರು ಆಧರಿಸಿ ವಿನಯ್ ವಿರುದ್ಧ ಮಡಿಕೇರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ವಿನಯ್ ನಿರೀಕ್ಷಣಾ ಜಾಮೀನು ಕೂಡ ಪಡೆದಿದ್ದರು. ಬಳಿಕ ರಾಜಕೀಯ ಪ್ರೇರಿತ ಎಫ್ಐಆರ್ ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿನಯ್ ಸೋಮಯ್ಯ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ವಿನಯ್ ಸೋಮಯ್ಯ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ.