ಮಂಗಳೂರು, ಸೆ 11 (DaijiworldNews/SM): ಅಂಬರ್ ಗ್ರೀಸ್ ( ತಿಮಿಂಗಿಲವಾಂತಿ) ಹೊಂದಿದ್ದ ಮೂವರನ್ನು ನಗರದ ಪಣಂಬೂರು ಬೀಚ್ ವ್ಯಾಪ್ತಿಯಿಂದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ಸೆಪ್ಟೆಂಬರ್ 11ರ ಸೋಮವಾರ ವರದಿಯಾಗಿದೆ.

ಉಡುಪಿ ಜಿಲ್ಲೆ ಸಾಲಿಗ್ರಾಮ ಗ್ರಾಮದ ಜಯಕರ(39), ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆದಿತ್ಯ(25), ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಲೋಹಿತ್ ಕುಮಾರ್ ಗುರಪ್ಪನವರ್(39) ಬಂಧಿತರಾಗಿದ್ದಾರೆ. ಬಂಧಿತರಿಂದ 90 ಲಕ್ಷ ರೂ. ಮೌಲ್ಯದ 900ಗ್ರಾಂ ತಿಮಿಂಗಿಲ ವಾಂತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೂವರು ಪಣಂಬೂರು ಬೀಚ್ ಬಳಿ ಅಂಬರ್ ಗ್ರೀಸ್ ಹೊಂದಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ವೇಳೆ ಆರೋಪಿಗಳು ರೆಡಿ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರಿಂದ ಅಂಬರ್ ಗ್ರೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.