ಮಂಗಳೂರು, ಜು 14 (DaijiworldNews/HR): ಮಂಗಳೂರು ಮಹಾನಗರದಲ್ಲಿ ಕೋಟ್ಪಾ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಮಂಗಳೂರು ಮಹಾನಗರದ ಎಲ್ಲಾ 15 ಪೊಲೀಸ್ ಠಾಣೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಯೋಗದಲ್ಲಿ ಜೂನ್ ತಿಂಗಳಿನಿಂದ ನಿರಂತರವಾಗಿ ಕೋಟ್ಪಾ-2003 ಮೇಗಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.


ಸಾರ್ವಜನಿಕರಿಗೆ ಹಾಗೂ ಧೂಮಪಾನ ವ್ಯಸನಿಗಳಿಗೆ ತಂಬಾಕಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿತ ಪ್ರದೇಶ ಉಲ್ಲಂಘನೆಗೆ 200 ರೂ. ದಂಡ ಎಂಬ ನಾಮಫಲಕವನ್ನು ಹಾಕಬೇಕು. ತಂಬಾಕು ಉತ್ಪನ್ನ ಮಾರುವ ಅಂಗಡಿಯವರಿಗೆ ಬಿಡಿ -ಸಿಗರೇಟ್ ಮತ್ತು ಬೀಡಿಗಳನ್ನು ಮಾರಾಟ ಮಾಡದಂತೆ ಎಚ್ಚರಿಸಿ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ 85% ರಷ್ಟು ಕ್ಯಾನ್ಸರ್ ಚಿತ್ರ ಇರುವ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಚಿಸಲಾಯಿತು.
ಶಾಲಾ ಕಾಲೇಜುಗಳ 100 ಮೀಟರ್ ಸುತ್ತಮುತ್ತ ಮಾರಾಟ ಮಾಡುವ ಅಂಗಡಿಗಳಿಗೆ ದಂಡ ವಿಧಿಸಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿ, ತಂಬಾಕು ತ್ಯಜಿಸಲು ಉಚಿತ ಸಮಾಲೋಚನೆ ಹಾಗೂ ಉಚಿತ ಚಿಕಿತ್ಸೆ ಪಡೆಯಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರೂಂ ನಂ. 46 ತಂಬಾಕು ವ್ಯರ್ಜನಾ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ಮಾಹಿತಿ ನೀಡಲಾಯಿತು.
ಇನ್ನು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿಗಳಾದ್ ಪುಂಡಲೀಕ ಲಕಾಟಿ, ಶ್ರುತಿ ಜೆ. ಸಾಲಿಯಾನ್, ವಿಜಯ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಪ್ರದೀಪ್ ಕುಮಾರ್ ಭಾಗವಹಿಸಿದ್ದರು.