ಬಂಟ್ವಾಳ, ಜೂ 16 (DaijiworldNews/HR): ಕುಟುಂಬದ ಮನಸ್ತಾಪದ ವಿಚಾರಕ್ಕೆ ಸಂಬಂದಿಸಿ ಪತ್ನಿ ಹಾಗೂ ಮಾವನಿಗೆ ಆರೋಪಿ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್ ನಲ್ಲಿ ನಡೆದಿದೆ.

ಜೂನ್ 15 ರಂದು ರಾತ್ರಿ 10.30 ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಆಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್ ನಲ್ಲಿ ತಡೆದು, ಚೂರಿ ಹಿಡಿದುಕೊಂಡು ಬಂದು ಪತ್ನಿ ದಿವ್ಯ ಳಿಗೆ ಇರಿಯಲು ಯತ್ನಿಸಿದ್ದಾನೆ. ಈ ವೇಳೆ ಬಿಡಿಸಲು ಹೋದ ಮಾವ ರಾಜೀವರಿಗೆ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯ ಇಬ್ಬರು ಗಂಭೀರವಾಗಿ ಗಾಯಗೊಂಡು, ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುತ್ತಾರೆ.
ಘಟನೆಯ ಕುರಿತು ಆಟೋ ಚಾಲಕ ಯಶೋಧರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಕೌಟುಂಬಿಕ ಮನಸ್ತಾಪದಿಂದಲೇ ಘಟನೆ ನಡೆದಿದೆ ಎನ್ನಲಾಗಿದೆ.