ಮಂಗಳೂರು, ಜೂ 15 (DaijiworldNews/MS): ರಾಷ್ಟ್ರಭಕ್ತರಾದ ವೀರ್ ಸಾರ್ವರ್ಕರ್ ಮತ್ತು ಹೆಗ್ಡೇವಾರ್ ಅವರುಗಳ ಪಾಠಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಕಾಂಗ್ರೆಸ್, ಸರ್ಕಾರ ಲೋಕಸಭೆ ಸ್ಥಾನದಿಂದ ಅನರ್ಹಗೊಂಡಿರುವ ವಿಫಲ ನಾಯಕನ ಹೆಸರಿನಲ್ಲಿ ಮಕ್ಕಳಿಗೆ ಪಠ್ಯ ರೂಪಿಸುತ್ತದೆಯೇ ? ಪ್ರಣಾಳಿಕೆಯ ಭರವಸೆ ಜಾರಿಗೆ ದಿನಾಂಕ ಗ್ಯಾರಂಟಿಯಾಗದ ಕಾರಣಕ್ಕೆ ಮತಾಂತರ ನಿಷೇಧ ಕಾಯಿದೆ ರದ್ದುಪಡಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದೀರಾ ? ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಸಂಪುಟದಲ್ಲಿ ತೆಗೆದುಕೊಂಡ ಈ ಎರಡು ನಿರ್ಣಯದ ವಿರುದ್ಧ ಕಿಡಿಕಾರಿರುವ ಅವರು, ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ತೆಗೆಯಿರಿ ಎಂದು ನಕಲಿ ಗಾಂಧಿಪಾರಿವಾರ ನೀಡಿದ ಆದೇಶವನ್ನು ಪಾಲನೆ ಮಾಡುತ್ತಿದ್ದೀರಾ ? ಮತಾಂಧ ಟಿಪ್ಪು, ದೇಶದ್ರೋಹಿ ಔರಂಗಜೇಬ್, ಅಧಿನಾಯಕಿ ಇಟಲಿ ಮೇಡಂ ಪಠ್ಯವನ್ನು ಸೇರಿಸಿ ಹೊಸ ಇತಿಹಾಸ ಬರೆಯುತ್ತೀರಾ ? ಎಂದು ಪ್ರಶ್ನಿಸಿದ್ದಾರೆ.
ಕನ್ನಡಿಗರು ಸುಮ್ಮನೆ ಕುಳಿತರೆ ಬೆಂಗಳೂರಿನಲ್ಲಿ ' ಲೂಲು ಮಾಲ್' ಕಟ್ಟಿದವರ ಇತಿಹಾಸವನ್ನೂ ಮುಂದಿನ ಪೀಳಿಗೆಯ ಜನಕ್ಕೆ ಕಾಂಗ್ರೆಸಿಗರು ಹೇಳಿಕೊಡಬಹುದು. ಮಂಗಳೂರು ಕುಕ್ಕರ್ ಸ್ಪೋಟದ ಆರೋಪಿಗೂ ದೇಶಭಕ್ತರ ಪಠ್ಯದ ಸಾಲಿನಲ್ಲಿ ಅವಕಾಶ ನೀಡಬಹುದು. ವಿದ್ಯಾರ್ಥಿಗಳು ಹಾಗೂ ಸಮಾಜದ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರದ ಈ ನೀತಿಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂಧರ ನಿಷೇಧ ಕಾಯಿದೆ ವಾಪಾಸ್ ತೆಗದುಕೊಳ್ಳುತ್ತದೆ ಎಂದು ನಾವು ಮೊದಲೇ ಎಚ್ಚರಿಸಿದ್ದೆವು. ಈಗ ಅದನ್ನು ನಿಜ ಮಾಡುತ್ತಿದೆ. ಸಮವಸ್ತ್ರ ಸಂಹಿತೆಯನ್ನು ಬದಿಗಿಟ್ಟಿದೆ. ಇಡಿ ರಾಜ್ಯಕ್ಕೆ ಹಿಜಾಬ್ ತೊಡಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.