ಮಂಗಳೂರು, ಜೂ 15 (DaijiworldNews/HR): ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿನ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 1 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಕಾರ್ಕಳ ತಾಲೂಕಿನ ಮಾಳ ಮಲ್ಲಾರ್ ದರ್ಕಾಸು ಮನೆ ನಿವಾಸಿ ಗಣೇಶ ನಾಯ್ಕ್(26), ಕೊಡಗು ಜಿಲ್ಲೆಯ ಗುಯ್ಯಾ ಗ್ರಾಮ ನಿವಾಸಿ ರಂಜಿತ್ ಕೆ.ಆರ್(26) ಎಂದು ಗುರುತಿಸಲಾಗಿದೆ.
ಜನವರಿ 15ರಿಂದ ಜನವರಿ 16ರ ಮಧ್ಯಾವಧಿಯಲ್ಲಿ ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಚಂದ್ರಿಕಾ ಎಂಬ ಹೆಸರಿನ ಮನೆಯ ಎದುರಿನ ಬಾಗಿಲಿನ ಲಾಕನ್ನು ಯಾರೋ ಕಳ್ಳರು ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳವುಗೈದಿದ್ದು, ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್ನು ಈ ಪ್ರಕರಣದ ತನಿಖೆಯನ್ನು ನಗರ ಅಪರಾಧ ವಿಭಾಗ(ಸಿಸಿಬಿ) ಕ್ಕೆ ಹಸ್ತಾಂತರಿಸಲಾಗಿತ್ತು. ಈ ಕ್ಷಿಷ್ಟಕರವಾದ ಹಾಗೂ ಯಾವುದೇ ಸುಳಿವು ಇಲ್ಲದ ಪ್ರಕರಣದ ತನಿಖೆಯನ್ನು ಕೈಗೊಂಡ ಮಂಗಳೂರು ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಿ ಚಾಣಕ್ಷತನದಿಂದ ಪ್ರಕರಣವನ್ನು ಭೇದಿಸಿ ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತರಿಂದ ಕಳವುಗೈದ ಸೊತ್ತುಗಳ ಪೈಕಿ ಒಟ್ಟು 1 ಕೆಜಿ ವಿವಿಧ ನಮೂನೆಯ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಶಪಡಿಸಿಕೊಂಡ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 55 ಲಕ್ಷ ಆಗಬಹುದು. ಅಲ್ಲದೇ ಆರೋಪಿಗಳ ವಶದಿಂದ 2 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 56,50,000/-ಆಗಬಹುದು. ಈ ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.