ಉಡುಪಿ, ಜೂ 15 (DaijiworldNews/HR): ಬಡವರಿಗೆ ನೀಡುವ ಅನ್ನಭಾಗ್ಯ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆತ್ಮ ವಂಚನೆಯ ಮಾತುಗಳನ್ನಾಡುತ್ತಿದ್ದಾರೆ. ಬಡವರಿಗಾಗಿ ಕೇಂದ್ರ ಸರ್ಕಾರ ಉಚಿತವಾಗಿ ಐದು ಕಿಲೋ ಅಕ್ಕಿ ವಿತರಣೆ ಮಾಡುತ್ತಿದೆ. ಈ ಹಿಂದೆ 29ರೂ. ಕೇಂದ್ರ ಹಾಗೂ 3 ರೂ. ರಾಜ್ಯ ಸರ್ಕಾರ ಹಾಕಬೇಕಾಗಿತ್ತು. ಆದರೆ ಈಗ ಮೋದಿ ಸರ್ಕಾರ ಸಂಪೂರ್ಣವಾಗಿ ಐದು ಕೆಜಿ ಅಕ್ಕಿ ಉಚಿತ ಕೊಡುತ್ತಿದೆ ಎಂದು ಮಾಜಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಹೇಳಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಭಾಷಣದಲ್ಲಿ 10ಕೆಜಿ ಎಂದು ಘೋಷಿಸಿತ್ತು. ರಾಜ್ಯ ಕೇಳಿರುವ 10 ಕೆಜಿ ಅಕ್ಕಿಯನ್ನು ಉಚಿತ ಓಪನ್ ಟೆಂಡರ್ ನಲ್ಲಿ ಕೊಡುವುದಾಗಿ ಕೇಂದ್ರ ಹೇಳಿದೆ. ಕೇಂದ್ರ ಸರಕಾರ ಕೊಡುವ ಉಚಿತ ಅಕ್ಕಿಯಲ್ಲಿ ಒಂದು ಗ್ರಾಂ ಕೂಡ ಕಡಿಮೆ ಮಾಡಿಲ್ಲ ಎಂದರು.
ಇನ್ನು ತಮ್ಮ ವೈಫಲ್ಯ ಮುಚ್ಚಲು ಕೇಂದ್ರ ಸರ್ಕಾರದ ಮೇಲೆ ಗೂಬೆಕೂರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸತ್ಯಕ್ಕೆ ಅಪಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಉಚಿತ ಐದು ಕೆಜಿ ಅಕ್ಕಿಯನ್ನು ಬಿಟ್ಟು ನೀವು 10 ಕೆಜಿ ಕೊಡಬೇಕು. ಚುನಾವಣೆಗೆ ಮುಂಚಿತವಾಗಿ ಕೊಟ್ಟ ಭರವಸೆಯನ್ನು ಈಡೇರಿಸಿ ಎಂದು ಆಗ್ರಹಿಸಿದ್ದಾರೆ.